ಖರ್ಗೆ ಲೂಟಿ ಗ್ಯಾಂಗ್ ಕಲಬುರಗಿ ಅಂಗಡಿ ಬಂದ್: ಕಟೀಲ್ ಲೇವಡಿ

ಕಲಬುರಗಿ,ನ.20:ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 24 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆಯವರನ್ನು ನಗರದಿಂದ ಹೊರಹಾಕಿದ್ದೀರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನಿಂದಾಗಿ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಬೆಂಗಳೂರಿಗೆ ಬಂದಿದ್ದಾರೆ. ಕಳೆದ 50 ವರ್ಷಗಳಿಂದ ಕಲಬುರ್ಗಿಯನ್ನು ಲೂಟಿ ಮಾಡಿದ್ದ ಖರ್ಗೆ ಅಂಗಡಿ ಈಗ ಬಂದ್ ಆಗಿದೆ. ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅಂಗಡಿ ಸಂಪೂರ್ಣ ಬಂದ್ ಆಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ್ ಕಟೀಲ್ ಅವರು ಲೇವಡಿ ಮಾಡಿದರು.
ನಗರದ ಜೇವರ್ಗಿ ರಸ್ತೆಯಲ್ಲಿರುವ ಕೆಇಬಿ ಕಲ್ಯಾಣ ಮಂಟಪದ ಎದುರು ಶನಿವಾರ ಹಮ್ಮಿಕೊಂಡ ಜನಸ್ವರಾಜ್ ಬೃಹತ್ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜನಸ್ವರಾಜ್ ಯಾತ್ರೆಗೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಕಲಬುರ್ಗಿಯ ಲೂಟಿ ಗ್ಯಾಂಗ್ ಖರ್ಗೆ ಅಂಗಡಿ ಬಂದ್ ಆಗಲಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಖರ್ಗೆಯನ್ನು ಸೋಲಿಸಿದ್ರಿ. ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ ಬಾರಿ 7 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಯನ್ನು ಈ ಬಾರಿ 24 ಸ್ಥಾನಗಳಿಗೆ ಗೆಲ್ಲಿಸಿದ್ದೀರಿ. ನಿಮಗೆಲ್ಲ ಹೃತ್ಪೂರ್ವಕ ಅಭಿನಂದನೆಗಳು. ಸಣ್ಣ ಖರ್ಗೆಯನ್ನು ಊರು ಬಿಡಿಸಿದ್ದೀರಿ. ಖರ್ಗೆ ಗ್ಯಾಂಗ್‍ಗೆ ಬುದ್ದಿ ಕಲಿಸಿದ ಜನತೆಗೆ ಅಭಿನಂದನೆ ಎಂದು ಅವರು ಹೇಳಿದರು.
ರಾಜ್ಯದ ರಕ್ಷಣೆಗಾಗಿ ಗೃಹ ಸಚಿವ ಅರಗ್ ಜ್ಞಾನೆಂದ್ರ ಅವರು ಹುಚ್ಚರಾಗಿ ಕೆಲಸ ಮಾಡುತ್ತಿದ್ದಾರೆ. ಅರಗ ಜ್ಞಾನೇಂದ್ರ ಅವರ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಕಾಂಗ್ರೆಸ್ಸಿನವರಿಗೆ ಹುಚ್ಚು ಹಿಡಿದಿದೆ. ಹಾಗಾಗಿ ಅರಗ್ ಜ್ಞಾನೇಂದ್ರ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಶಾಲೆಯೊಂದರ ಕುರಿತು ಚಿಕ್ಕ ಕಥೆಯನ್ನು ಹೇಳಿದ ನಳಿನಕುಮಾರ್ ಕಟೀಲ್ ಅವರು, ಅಪ್ಪುಗೌಡ ಅಂತಹ ವಿದ್ಯಾರ್ಥಿಯೊಬ್ಬ ಶಾಲೆಯ ಹಿಂದಿನ ಬೆಂಚ್‍ನಲ್ಲಿ ಕುಳಿತಿದ್ದ. ಆತ ಹುಚ್ಚೆದ್ದು ಪಾಠವನ್ನು ಕೇಳುತ್ತಿದ್ದ. ಹುಚ್ಚು ಮತ್ತು ಕರ್ತವ್ಯ ಎರಡೂ ಅರಗ್ ಜ್ಞಾನೇಂದ್ರ ಅವರಲ್ಲಿವೆ. ಆದ್ದರಿಂದ ರಾಜ್ಯದಲ್ಲಿ ಯಾವುದೇ ಬಾಂಬ್ ಸ್ಫೋಟವೂ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಅವರು ಹೇಳಿದರು.
ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ, ಸಂಸದ ಡಾ. ಉಮೇಶ್ ಜಾಧವ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ರಾಜ್ಯದ ಗೃಹ ಸಚಿವ ಅರಗ್ ಜ್ಞಾನೇಂದ್ರ, ರಾಜ್ಯದ ಬೃಹತ್ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಾಸಕ ಎನ್. ಮಹೇಶ್ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ ಅವರು ಮಾತನಾಡಿದರು. ಅಶೋಕ್ ಗಸ್ತಿ ಅವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಮೇಲೆ ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಯ ಅಧ್ಯಕ್ಷರು, ಮಾಜಿ ಶಾಸಕರು ಮುಂತಾದವರು ಉಪಸ್ಥಿತರಿದ್ದರು.