ಖರ್ಗೆ ಪಿಎಂ ಆಗುವುದು ಸಿದ್ದುಗೆ ಬೇಕಿಲ್ಲ:ಎಚ್‌ಡಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಡಿ.೩೦:ಇಂಡಿಯಾ ಮೈತ್ರಿಕೂಟದ ಪಕ್ಷಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಮಾಡಬೇಕು ಎಂದು ಹೇಳುತ್ತಿವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್‌ಗಾಂಧಿ ಪ್ರಧಾನಿಯಾಗಲಿ ಎಂದು ಹೇಳುವ ಮೂಲಕ ದಲಿತ ಸಮುದಾಯದವರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅಧಿಕಾರ ಹಿಡಿಯಲು ಅಹಿಂದ ಬೇಕು, ಆದರೆ, ಒಬ್ಬ ಕನ್ನಡಿಗ ಪ್ರಧಾನಿಯಾಗಲಿ ಎಂದು ಹೇಳಲ್ಲ, ಸಿದ್ದರಾಮಯ್ಯನವರದು ಇದೆಂತಹ ಮನಃಸ್ಥಿತಿ ಇರಬಹುದು ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರವರ ಹೇಳಿಕೆಯನ್ನು ದಲಿತ ಸಮುದಾಯ ಸೂಕ್ಷ್ಮವಾಗಿ ಗಮನಿಸಬೇಕು. ಚುನಾವಣೆ ಬಂದಾಗ ದಲಿತರು ನಂತರ ಬೇರೆ ಮಾತು ಎಂದು ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ಬಳಿಕ ಮತ್ತೊಬ್ಬ ಕನ್ನಡಿಗ ಪ್ರಧಾನಿಯಾದರೆ ನಾನು ಸ್ವಾಗತಿಸುತ್ತೇನೆ. ನಾನು ಎನ್‌ಡಿಎನಲ್ಲಿ ಇರಬಹುದು, ಆದರೆ ಅಸೂಯೆ ಪಡುವಂತದ್ದು ಏನೂ ಇಲ್ಲ. ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕಿದೆ. ಹೀಗಿರುವಾಗ ಸಿದ್ದರಾಮಯ್ಯರವರು ಈ ರೀತಿ ಹೇಳಿಕೆ ನೀಡುವ ಅಗತ್ಯವಿರಲಿಲ್ಲ. ಖರ್ಗೆ ಪರವಾಗಿ ಮಾತನಾಡದಿದ್ದರೂ ಪರವಾಗಿಲ್ಲ ಸುಮ್ಮನಿದ್ದರೆ ಸಾಕಿತ್ತು ಎಂದರು.
ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರನ್ನು ರಾಜ್ಯರಾಜಕಾರಣದಿಂದ ಖಾಲಿ ಮಾಡಿಸಿದ್ದು ಯಾರು ಎಂಬುದು ಗೊತ್ತಿದೆ. ದಲಿತ ಸಮುದಾಯದವರು ಸಿದ್ದರಾಮಯ್ಯರವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸುದೀರ್ಘವಾಗಿ ರಾಜಕಾರಣದಲ್ಲಿದ್ದಾರೆ. ಇವರಿಗೆ ಸಲಹೆಗಾರರು ಬೇಕಾ? ೧೪ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರರನ್ನಾಗಿ ರಾಯರೆಡ್ಡಿ ಅವರನ್ನು ನೇಮಕ ಮಾಡಿದ್ದಾರೆ. ಅನುಭವ ಇರುವ ತಜ್ಞರನ್ನು ನೇಮಕ ಮಾಡಿಕೊಂಡಿಲ್ಲ. ದೇಶಪಾಂಡೆ ಅವರು ೨೫ ವರ್ಷ ಮಂತ್ರಿಗಳಾಗಿದ್ದವರು. ಅವರ ಕೈಯಲ್ಲಿ ಏನು ಸುಧಾರಣೆ ಮಾಡಿಸುತ್ತೀರಿ. ಬಿ.ಆರ್ ಪಾಟೀಲ್ ಅವರಿಗೆ ಯಾವ ಅನುಭವ ಇದೆ. ಇವರೆಲ್ಲರ ನೇಮಕ ಮಾಡಿಕೊಳ್ಳಲು ಈ ಹುದ್ದೆಗಳು ಗಂಜಿ ಕೇಂದ್ರವಾ? ವಿಧಾನಸೌಧದಲ್ಲಿ ಏನು ಬೇಕಾದರು ಮಾಡಬಹುದು ಅಂದುಕೊಂಡಿದ್ದಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿರುದ್ಧ ಕಿಡಿಕಾರಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಭಜನೆ ಬಿಟ್ಟರೆ ಬೇರೆ ಏನು ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಎಲ್ಲಾಗಿವೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯಾಗಲಿ ಎಂದು ಸುಮ್ಮನಿದ್ದೆ. ಮುಂದಿನ ಅಧಿವೇಶನದಲ್ಲಿ ಸರ್ಕಾರದ ಹಗರಣಗಳನ್ನು ಬಿಚ್ಚಿಡುತ್ತೇನೆ ಎಂದರು.
ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ೨ ಸಾವಿರ ರೂ. ಹಣವನ್ನು ಸರಿಯಾಗಿ ಕೊಡುತ್ತಿಲ್ಲ. ಮೇವು ಖರೀದಿಗೆ ಹಣ ನೀಡಿದ್ದು ಬಿಟ್ಟರೆ ಬರ ನಿರ್ವಹಣೆಗೆ ಏನೂ ಆಗಿಲ್ಲ ಎಂದು ಹರಿಹಾಯ್ದರು.
ಬೆಂಗಳೂರಿ ಪುಟ್ಪಾತ್‌ನಲ್ಲಿ ಟ್ಯಾಂಕರ್ ಇಟ್ಟು ಕುಡಿಯುವ ನೀರು ಕೊಡುತ್ತಿದ್ದಾರೆ. ಇದೇನಾ ಬ್ರಾಂಡ್ ಬೆಂಗಳೂರು ಎಂದು ಹರಿಹಾಯ್ದರು. ರೈತರ ಬೆಳೆ ನಾಶವಾಗುತ್ತಿದೆ ಎಂದು ಪ್ರತಿಭಟನೆ ನಡೆದಿದ್ದರೂ ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟಿಲ್ಲ. ಇದು ಸರ್ಕಾರಕ್ಕೆ ರೈತರ ಬಗ್ಗೆ ಇರುವ ಕಾಳಜಿ ಎಂದು ಕಿಡಿಕಾರಿದರು.
ಈ ಸರ್ಕಾರ ಗ್ಯಾರೆಂಟಿಗೆ ಮಾತ್ರ ಆದ್ಯತೆ ಕೊಟ್ಟಿದೆ. ಅಭಿವೃದ್ಧಿಗೆ ಆಧ್ಯತೆ ನೀಡಿಲ್ಲ. ಬರ ನಿರ್ವಹಣೆಯೂ ಆಗಿಲ್ಲ ಪದೇ ಪದೇ ಕೇಂದ್ರದ ಮೇಲೆ ಆರೋಪ ಮಾಡುತ್ತಾರೆ ಅಷ್ಟೆ. ರೈತರ ಆತ್ಮಹತ್ಯೆಗಳು ಆರಂಭವಾಗಿವೆ. ಸರ್ಕಾರ ಈಗಲಾದರೂ ಎಚ್ಚೆತ್ತು ರೈತರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ಶಾಲೆಗಳಲ್ಲಿ ಶೌಚಾಲಯ ಸ್ವಚ್ಛ ಮಾಡಲು ಸರ್ಕಾರದ ಬಳಿ ಹಣ ಇಲ್ಲ, ದುಡ್ಡು ಕೊಡದೆ ಮಕ್ಕಳಿಂದ ಸ್ವಚ್ಛ ಮಾಡಿಸಿದ್ದೀರಿ. ನಿಮ್ಮ ತಪ್ಪಿಗೆ ಶಿಕ್ಷಕರನ್ನು ಸಸ್ಪೆಂಡ್ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಉದ್ಯೋಗ ಮೇಳ ಮಾಡುವ ಬದಲು ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತುಂಬಿ ಶಿಕ್ಷಕರ ಕೊರತೆಯೂ ಇದೆ. ಇದನ್ನು ಸರಿಪಡಿಸಿ ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಹೂಡಿಕೆ ಬಂದಿದೆ ಎಂದು ಕೈಗಾರಿಕಾ ಸಚಿವರು ಹೇಳುತ್ತಾರೆ. ಎಷ್ಟು ಹೂಡಿಕೆ ಬಂದಿದೆ. ಎಷ್ಟು ಎಂಓಯುಗೆ ಸಹಿ ಹಾಕಿದ್ದಾರೆ ಎಂದು ಹೇಳಲಿ ಹೂಡಿಕೆಗಳು ಕಡಿಮೆಯಾಗಿವೆ ಎಂದರು. ಕೊರೊನಾ ಕಾಲದಲ್ಲಿ ೪೦ ಸಾವಿರ ಕೋಟಿ ರೂ. ಹಗರಣ ಆಗಿದೆ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನಂಬಲು ಸಾಧ್ಯನಾ ಏನೋ ೨-೩ ಸಾವಿರ ಕೋಟಿ ಎಂದರೆ ಮಾತನಾಡಬಹುದು, ಆದರೆ ಹಗರಣ ನಡೆದೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ಒಳಗಿನ ಸಮಸ್ಯೆಗಳಿಂದ ಯತ್ನಾಳ್ ಮಾತನಾಡಿದ್ದಾರೆ ತನಿಖೆಯಾಗಲಿ ಎಲ್ಲವೂ ಹೊರ ಬರುತ್ತದೆ ಎಂದರು. ನೈಸ್ ಅಕ್ರಮದ ಬಗ್ಗೆ ಕ್ರಮಕೈಗೊಳ್ಳದೆ ಜಯಚಂದ್ರ ಕೊಟ್ಟಿರುವ ವರದಿಯನ್ನು ಹಾಗೆಯೇ ಇಟ್ಟುಕೊಂಡಿರುವ ಬಗ್ಗೆಯೂ ಕುಮಾರಸ್ವಾಮಿ ಕಿಡಿಕಾರಿದರು.