ಖರ್ಗೆ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ, ಜೂ.೨-ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್‌ಡಿಎಗೆ ಭಾರೀ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದ ಬೆನ್ನಲ್ಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಪ್ರಮುಖರು ಹಾಗು ಎಲ್ಲಾ ಅಭ್ಯರ್ಥಿಗಳೊಂದಿಗೆ ಇಂದು ಮಧ್ಯಾಹ್ನ ಮಹತ್ವದ ಸಭೆ ಕರೆದಿದ್ದಾರೆ.
ಜೂನ್ ೪ ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಸೇರಿದಂತೆ ಪಕ್ಷದ ಹಲವು ಆಂತರಿಕ ವಿಷಯಗ ಕುರಿತು ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ.
ಮಧ್ಯಾಹ್ನ ೧ ಗಂಟೆಯ ನಂತರ ವರ್ಚುವಲ್ ಮೂಲಕ ಸಭೆ ನಡೆಯಲಿದ್ದು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ದೇಶಾದ್ಯಂತದ ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸುವ ಮೂಲಕ ಲೋಕಸಭೆ ಫಲಿತಾಂಶ ಮುನ್ನ ಅಗತ್ಯ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ, ರಾಜಸ್ಥಾನದ ಮಾಜಿ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ಪಕ್ಷದ ಇತರ ಪ್ರಮುಖ ನಾಯಕರು ಜೂನ್ ೪ ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಮತಗಳ ಎಣಿಕೆಗೆ ಸಿದ್ಧತೆ ನಂತರದ ಕಾರ್ಯತಂತ್ರ ಸೇರಿದಂರೆ ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸುವುದು ನಿಜವಾದರೆ ನಾವು ಎಡವಿದ್ದು ಎಲ್ಲಿ, ಯಾಕೆ ಎನ್ನುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ ೪ ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮುಂದೆ ಅನುಸರಿಬೇಕಾದ ನಡೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪ್ರತಿಪಕ್ಷಗಳ ನೇತೃತ್ವದ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ -ಇಂಡಿಯಾ ಬ್ಲಾಕ್ ಸಭೆ ನಡೆದ ಬೆನ್ನಲ್ಲೇ ಈ ಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.