ಖರ್ಗೆ ನಿಂದನೆ: ಸೂಲಿಬೆಲೆ ಬಂಧನಕ್ಕೆ ಒತ್ತಾಯ

ಕಲಬುರಗಿ,ಜ.22: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಚಕ್ರವರ್ತಿ ಸೂಲಿಬೆಲೆ ಅವರನ್ನು ತಕ್ಷಣ ಬಂಧಿಸಬೇಕೆಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಕನಿರಾಂ ರಾಠೋಡ್ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮನುವಾದಿ ಸಿದ್ಧಾಂತ ಪರಿಚಯಿಸಬೇಕೆಂಬ ದುರುದ್ದೇಶದೊಂದಿಗೆ ಸೂಲಿಬೆಲೆ ಇಂತಹ ಹೇಳಿಕೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಅಶಾಂತಿ ಹರಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸೂಲಿಬೆಲೆ ಅವರು ಖರ್ಗೆಯವರ ಕುರಿತು ಆಡಿರುವ ಹಗುರವಾದ ಮಾತು ಕೇವಲ ಅವರೊಬ್ಬರನ್ನೇ ನಿಂದಿಸಿದಂತಲ್ಲ; ಇಡೀ ದಲಿತ ಹಾಗೂ ಹಿಂದುಳಿದ ವರ್ಗವನ್ನು ನಿಂದಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಈಗಾಗಲೇ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಕಲಬುರಗಿಯ ಪೆÇಲೀಸ್ ಕಮಿಷನರ್ ಮೂಲಕ ದೂರು ದಾಖಲಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಜ.19ರಂದು ಸೂಲಿಬೆಲೆ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಕೇವಲ ಎಫ್.ಐ.ಆರ್ ದಾಖಲಿಸಿ ಕೈ ತೊಳೆದುಕೊಂಡರೆ ಸಾಲದು. ಬದಲಿಗೆ ಕೂಡಲೆ ಚಕ್ರವರ್ತಿ ಅವರನ್ನು ಬಂಧಿಸಬೇಕೆಂದು ಅವರು ತಾಕೀತು ಮಾಡಿದರು.
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಮಲ್ಲಿಕಾರ್ಜುನ ನೀಲೂರ್, ತಿಪ್ಪಣ್ಣ ಒಡೆಯರಾಜ್, ಮಹೇಶ್ ತೆಲ್ಲೂರಕರ್, ಅಪ್ಪಾರಾವ್ ಪಟ್ಟಣ ಇದ್ದರು.