ಖರ್ಗೆ ತವರಲ್ಲಿ ಮೋದಿ ರಣಕಹಳೆ

ಬಿಜೆಪಿಯಲ್ಲಿ ರಣೋತ್ಸಾಹ

(ಸಂಜೆವಾಣಿ ಪ್ರತಿನಿಧಿಯಿಂದ)
ಕಲಬುರಗಿ,ಮಾ.೧೬:ಬಸವಾದಿ ಶರಣರ-ಸಂತರ ನಾಡು ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಲೋಕಸಭಾ ಚುನಾವಣೆಯ ಬಿಜೆಪಿಯ ಪ್ರಚಾರದ ರಣಕಹಳೆ ಮೊಳಗಿಸಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿಯಲ್ಲಿಂದು ಪ್ರಧಾನಿ ಮೋದಿ ಅವರು ರೋಡ್ ಶೋ ನಡೆಸಿ ನಂತರ ಬಿಜೆಪಿಯ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಜತೆಗೆ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದರು.
ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟಣೆಗೆ ಕೆಲವೇ ಗಂಟೆಗಳ ಮುನ್ನ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರಮೋದಿ ಅವರು ಲೋಕಸಭಾ ಚುನಾವಣೆಯ ಜಿದ್ದಾಜಿದ್ದಿನ ಹೋರಾಟಕ್ಕೆ ಕಾರ್ಯಕರ್ತರನ್ನು ಅಣಿಯಾಗಿಸಿ ಅವರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದರು.
೨೦೧೯ರ ಲೋಕಸಭಾ ಚುನಾವಣೆಯಲ್ಲೂ ಕಲಬುರಗಿಯಿಂದಲೇ ಚುನಾವಣಾ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿ ಅವರು ೨೦೨೪ರಲ್ಲೂ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿದ್ದರು.
ಅದ್ಧೂರಿ ಸ್ವಾಗತ, ರೋಡ್ ಶೋ
ತೆಲಂಗಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಅಲ್ಲಿಂದಲೇ ನೇರವಾಗಿ ಮಧ್ಯಾಹ್ನ ೧ ಗಂಟೆಗೆ ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿಯ ಎಲ್ಲ ಪ್ರಮುಖರು ಕಲಬುರಗಿಯ ಹೆಲಿಪ್ಯಾಡ್‌ನಲ್ಲಿ ಹಾಜರಿದ್ದು, ಪ್ರಧಾನಿ ಅವರನ್ನು ಬರಮಾಡಿಕೊಂಡರು.ಕಲಬುರಗಿಯ ಡಿಆರ್ ಮೈದಾನದಿಂದ ಎನ್‌ವಿ ಮೈದಾನದವರೆಗೂ ಪ್ರಧಾನಿ ಅವರು ಭರ್ಜರಿ ರೋಡ್ ಶೋ ನಡೆಸಿದರು. ರೋಡ್ ಶೋ ನಂತರ ಪ್ರಧಾನಿ ನರೇಂದ್ರಮೋದಿ ಅವರು ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾದರು.
ಎಐಸಿಸಿ ಅಧ್ಯಕ್ಷರ ತವರು ನೆಲ
ಈ ಬಾರಿಯ ಲೋಕಸಭಾ ಚುನಾವಣೆ ಹಲವು ಆಯಾಮಗಳಿಂದ ವಿಶೇಷತೆ ಪಡೆದಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತುತ ಎಐಸಿಸಿ ಅಧ್ಯಕ್ಷರೂ ಆಗಿರುವುದರಿಂದ ಅವರದ್ದೇ ತವರು ನೆಲವಾಗಿರುವ ಕಲಬುರಗಿಯಿಂದ ಮೋದಿ ತಮ್ಮ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಮೇಲಾಗಿ, ಕಳೆದ ೧೭ನೇ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಖರ್ಗೆಯವರಿಗೆ ಸೋಲಿನ ಕಹಿ ಉಣಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಈ ಬಾರಿಯೂ ಡಾ.ಉಮೇಶ್ ಜಾಧವ್ ಅವರಿಗೇ ಟಿಕೆಟ್ ಅಂತಿಮಗೊಳಿಸಿದ್ದು, ಮತ್ತೊಮ್ಮೆ ಖರ್ಗೆಯವರನ್ನು ಹಣಿಯಲು ವೇದಿಕೆ ಸಜ್ಜುಗೊಳಿಸುವ ಭಾಗವಾಗಿ ಪ್ರಧಾನಿ ಮೋದಿ ಕಲಬುರಗಿ ನಗರದಿಂದಲೇ ತಮ್ಮ ಚುನಾವಣಾ ಪ್ರಚಾರ ಆರಂಭಿಸುವಲ್ಲಿ ಒಲವು ತೋರಿದ್ದಾರೆ.
ಗಮನಾರ್ಹ ಅಂಶವೆಂದರೆ, ಈ ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಅನುಮಾನ ಎನ್ನಲಾಗುತ್ತಿದ್ದು, ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಹೆಚ್ಚಾಗಿದೆ. ಇಷ್ಟಾದರೂ, ಎಐಸಿಸಿ ಅಧ್ಯಕ್ಷರ ತವರು ನೆಲವಾಗಿರುವ ಕಲಬುರಗಿಯಿಂದ ಚುನಾವಣಾ ಪ್ರಚಾರ ಆರಂಭಿಸುವ ಮೂಲಕ ಒಟ್ಟಾರೆ ಕಾಂಗ್ರೆಸ್ ಪಕ್ಷದ ಯಾವುದೇ ಅಭ್ಯರ್ಥಿ ಕಣದಲ್ಲಿದ್ದರೂ, ನೇರವಾಗಿ ಖರ್ಗೆಯವರಿಗೆ ಬಿಸಿ ಮುಟ್ಟಿಸುವ ಇರಾದೆ ಬಿಜೆಪಿ ಹೈಕಮಾಂಡ್ ತಳೆದಿದೆ ಪಕ್ಷದ ವರಿಷ್ಠರೊಬ್ಬರು ಹೇಳುತ್ತಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಎನ್.ರವಿಕುಮಾರ್, ಪಕ್ಷದ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜಕುಮಾರ್ ಪಾಟೀಲ್ ತೇಲ್ಕೂರ್, ಸುಭಾಷ್ ಗುತ್ತೇದಾರ್ ಸೇರಿದಂತೆ ಇನ್ನಿತರ ಮುಖಂಡರು ಈ ರೋಡ್ ಶೋ ವೇಳೆ ಜೊತೆಗಿದ್ದರು.

ಲಕ್ಷಕ್ಕೂ ಅಧಿಕ ಅಭಿಮಾನಿಗಳು
ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಕಲಬುರಗಿ, ಯಾದಗಿರಿ, ಬೀದರ್ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ನಗರಕ್ಕೆ ಆಗಮಿಸಿದ್ದರು.
ಬಲಿಷ್ಠ ಪೊಲೀಸ್ ಭದ್ರತೆಯ ಮಧ್ಯೆಯೂ ತಮ್ಮ ನೆಚ್ಚಿನ ನಾಯಕನನ್ನು ಕಾಣಲು ಚುರುಗುಡುತ್ತಿದ್ದ ಸುಮಾರು ೩೮ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ರಸ್ತೆ ಬದಿಯ ಫುಟ್‌ಪಾತ್‌ಗಳಲ್ಲಿ ನಿಂತಿದ್ದ ಅಭಿಮಾನಿಗಳು ಮೋದಿ ಅವರನ್ನು ಕಂಡ ಕೂಡಲೆ ಕೈ ಬೀಸಿ ತಮ್ಮ ಸಂತಸ ವ್ಯಕ್ತಪಡಿಸಿದರು. ಮೇಲಾಗಿ, ಮೋದಿ ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗುವ ಮೂಲಕ ಪ್ರಧಾನಿ ಮೋದಿ ಅವರನ್ನು ಹುರಿದುಂಬಿಸಿದರು.