ಖರ್ಗೆಗೆ ಇ.ಡಿ. ವಿಚಾರಣೆ : ಗುತ್ತೇದಾರ ಖಂಡನೆ

ಕಲಬುರಗಿ,ಆ.5-ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇ.ಡಿ. ವಿಚಾರಣೆ ಮಾಡುತ್ತಿರುವದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧಿವೇಶನ ನಡೆಯುತ್ತಿರುವಾಗ ಖರ್ಗೆಯವರನ್ನು ಇ.ಡಿ. ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ನೀಡಿರುವದು ಅಕ್ಷಮ್ಯ ಎಂದು ತಿಳಿಸಿದ್ದಾರೆ.
ಸಂವಿಧಾನಬದ್ಧ ಸಂಸ್ಥೆಗಳಾದ ಇ.ಡಿ, ಸಿ.ಬಿ.ಐ, ಐ.ಟಿ ಇವುಗಳನ್ನು ಬಿಜೆಪಿ ಸರಕಾರ ಪ್ರತಿಪಕ್ಷಗಳ ನಿಯಂತ್ರಿಸಲು ಬಳಸುತ್ತಿರುವದು ಪ್ರಜಾಪ್ರಭುತ್ವದ ವಿರೋಧಿ ನೀತಿಗೆ ಕನ್ನಡಿಯಾಗಿದೆ. ಬಿಜೆಪಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷದ ಬಾಯಿ ಮುಚ್ಚಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಭಾರತೀಯ ಪ್ರಜೆಗಳು ಪ್ರಜ್ಞಾವಂತರಾಗಿದ್ದು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಕಳಂಕರಹಿತ ರಾಜಕಾರಣಿಯಾಗಿದ್ದು ಅಧಿವೇಶನದಲ್ಲಿ ಬಿಜೆಪಿ ಸರಕಾರವನ್ನು ತಮ್ಮ ಮಾತಿನ ಮೂಲಕ ಕಟ್ಟಿಹಾಕುತ್ತಿದ್ದಾರೆ. ಅದೇ ರೀತಿಯಾಗಿ ಬಿಜೆಪಿ ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಇದನ್ನು ಸಹಿಸದೇ ಪ್ರಧಾನಿ ನರೇಂದ್ರ ಮೋದಿಯವರು ವಾಮ ಮಾರ್ಗದ ಮೂಲಕವಾಗಿ ಇ.ಡಿ. ವಿಚಾರಣೆ ನೆಪದ ಮೂಲಕ ಖರ್ಗೆ ಅವರನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಖರ್ಗೆ ಅವರು ಅಂಜುವದಿಲ್ಲ, ಅಳಕುವದಿಲ್ಲ. ಖರ್ಗೆಯವರ ಬೆನ್ನಿಗೆ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು, ಮುಖಂಡರು, ಕೊಟ್ಯಾಂತರ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ ಎಂದು ತಿಳಿಸಿದ್ದಾರೆ.
ಸಂವಿಧಾನಬದ್ಧ ಸಂಸ್ಥೆಗಳಲ್ಲೊಂದಾದ ಇ.ಡಿ. ಯನ್ನು ದುರುಪಯೋಗಪಡಿಸಿಕೊಂಡು ಖರ್ಗೆಯವರಿಗೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇ.ಡಿ ವಿಚಾರಣೆಗೆ ಸಮನ್ಸ್ ನೀಡಿರುವದು ಬಿಜೆಪಿ ಸರಕಾರದ ಪ್ರಧಾನಿ ನರೇಂದ್ರ ಮೋದಿಯವರ ಈ ನಡೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.