ಖರೀಫ್ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ರೈತರಲ್ಲಿ ಮನವಿ

ಬೀದರ:ಜು.22:ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2022-23ನೇ ಸಾಲಿನ ಖರೀಫ್ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವಂತೆ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಅವರು ಜಿಲ್ಲೆಯ ರೈತರಿಗೆ ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್‍ನೊಂದಿಗೆ ಆಧ್ಯರ್ಪಿತಗೊಂಡು ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ 183 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಷೇರುದಾರ ಸದಸ್ಯರಾದ ಬೆಳೆ ಸಾಲ ಪಡೆದ ರೈತರು ಹಾಗೂ ಸಾಲ ಪಡೆಯದ ರೈತರು ಈ ಸಾಲಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳ ಪೈಕಿ ಹಾಗೂ ಸರಕಾರ ಬೆಳೆ ವಿಮೆಗೆ ಗುರುತಿಸಿರುವ ಬೆಳೆಗಳ ಕುರಿತು ತಿಳಿದುಕೊಂಡು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ 10 ದಿನಗಳ ಕಾಲ ನಿರಂತರ ಮಳೆಯಾಗಿ ತೇವಾಂಶ ಹೆಚ್ಚಾಗಿ, ಬೆಳೆಗಳ ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬರುತ್ತಿದೆ. ಬಿತ್ತನೆ ಮಾಡಿರುವ ರೈತರ ಬೆಳೆಗಳಲ್ಲಿ ಕೀಟ ಬಾಧೆಯಿಂದ ಬೆಳೆಗಳು ನಾಶ ಆಗಿರುವುದರ ಕುರಿತು ಅಲ್ಲಲ್ಲಿ ವರದಿಯಾಗಿವೆ.

ಜಿಲ್ಲೆಯ ಅನ್ನದಾತರು ಕಳೆದ ಆರು ವರ್ಷಗಳಿಂದ ಬೆಳೆ ವಿಮೆ ಮಾಡಿಸಿಕೊಂಡು, ತಮ್ಮ ಆರ್ಥಿಕ ಭದ್ರತೆ ಕಾಪಾಡಿಕೊಂಡು ಸಾಗುತ್ತಿರುವುದು ಉತ್ತಮ ಸಾಧನೆಯ ಸಂಕೇತವಾಗಿದೆ. ಆರು ವರ್ಷಗಳಲ್ಲಿ ಡಿಸಿಸಿ ಬ್ಯಾಂಕ್‍ನ ಮೂಲಕ ಬೆಳೆ ವಿಮೆ ರೈತರ ಪಾಲಿನ ಪ್ರೀಮಿಯಂ ಮೊತ್ತ 64.53 ಕೋಟಿಗಳನ್ನು ವಿಮಾ ಕಂಪೆನಿಗೆ ಪಾವತಿಸಿದ್ದು, ಆಯಾ ವಾರ್ಷಿಕ ಋತುಮಾನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾಗಿ ಬೆಳೆ ನಷ್ಟವಾಗಿದ್ದರಿಂದ ಬ್ಯಾಂಕ್‍ನ ರೈತರ ಖಾತೆಗಳಿಗೆ ಸುಮಾರು 376.02 ಕೋಟಿ ರೂ.ಗಳಷ್ಟು ಬೆಳೆ ವಿಮೆ ಮೊತ್ತ ನೇರವಾಗಿ ಬಂದಿರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದಿನಂತೆ ಈ ವರ್ಷವೂ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬಂದು ಕೃಷಿ ಅಲ್ಪಾವಧಿ ಬೆಳೆ ಸಾಲ ಪಡೆದ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಹಾಗೂ ಕೃಷಿ ಸಾಲ ಪಡೆಯದಿರುವ ರೈತರು ಡಿಸಿಸಿ ಬ್ಯಾಂಕ್‍ನ ಎಲ್ಲ ಶಾಖೆಗಳಲ್ಲಿ ತಮ್ಮ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡು ಬೆಳೆಗಳಿಗೆ ಭದ್ರತೆ ಮಾಡಿಕೊಳ್ಳಬೇಕು ಎಂದು ಉಮಾಕಾಂತ ನಾಗಮಾರಪಳ್ಳಿ ಸಲಹೆ ನೀಡಿದ್ದಾರೆ.

ಕೆಲ ಗ್ರಾಮಗಳಲ್ಲಿ ಖಾಸಗಿಯವರು ರೈತರಿಂದ 50 ರಿಂದ 100 ರೂಪಾಯಿಗಳನ್ನು ಒಂದು ಅರ್ಜಿಗೆ ಪಡೆದು ಮುಗ್ಧ ರೈತರಿಗೆ ಆರ್ಥಿಕ ಹೊರೆ ಮಾಡಿ, ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಎಲ್ಲ ರೈತರು ಅರ್ಜಿಗಳನ್ನು ತಂತ್ರಾಂಶದಲ್ಲಿ ಭರ್ತಿ ಮಾಡಲು ಹಣವನ್ನು ಖರ್ಚು ಮಾಡಿಕೊಳ್ಳದೇ, ಸಮೀಪದ ಡಿಸಿಸಿ ಬ್ಯಾಂಕ್‍ನ ಶಾಖೆಗಳಿಗೆ ಹಾಗೂ ಪ್ಯಾಕ್ಸ್‍ಗಳಿಗೆ ಭೇಟಿ ನೀಡಿ, ಅರ್ಜಿಗಳನ್ನು ಸಲ್ಲಿಸಿ, ಯಾವುದೇ ಖರ್ಚಿಲ್ಲದೆ ಅರ್ಜಿ ಅಪ್‍ಲೋಡ್ ಮಾಡಿಸಿ, ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಬಹುದು ಎಂದಿದ್ದಾರೆ.

ಬೆಳೆ ವಿಮೆ ನೋಂದಣಿಗೆ ಜುಲೈ 31 ಕಡೆಯ ದಿನವಾಗಿದ್ದು, ಕೊನೆ ದಿನದವರೆಗೆ ಕಾಯದೆ, ರೈತರು ಕೂಡಲೇ ಬೆಳೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಅವರು ಕೋರಿದ್ದಾರೆ.