ಖರೀದಿ ಭರಾಟೆಯಲ್ಲಿ ಕೊರೊನಾ ಮರೆತ ಜನ

ಸೈದಾಪುರ:ಎ.29:ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದರು, ಸಾರ್ವಜನಿಕರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಗತ್ಯ ವಸ್ತುಗಳ ಖರೀದಿ ಭರಾಟೆಯಲ್ಲಿ ಮುಗಿಬಿದ್ದ ದೃಶ್ಯ ಬುಧವಾರ ಕಂಡು ಬಂತು. ಪಟ್ಟಣದ ಬಸವೇಶ್ವರ ವೃತ್ತ ಮತ್ತು ಕನಕ ವೃತ್ತದಲ್ಲಿ ಜನರು ತಮ್ಮ ದಿನ ನಿತ್ಯದ ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಬೆಳಿಗ್ಗೆಯಿಂದಲೇ ಜನ ಗುಂಪು ಗುಂಪಾಗಿ ಬಂದು ತರಕಾರಿ, ದಿನಸಿ ವಸ್ತುಗಳನ್ನು ಖರೀದಿಸಿದರು.

ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದ ಜನ: ಕೊರೊನಾದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜನರು ಕಿರಾಣಿ ಅಂಗಡಿಗಳ ಮುಂದೆ, ತರಕಾರಿ ಅಂಗಡಿಗಳ ಮುಂದೆ ಯಾವುದೇ ಮುಂಜಾಗ್ರತ ಕ್ರಮಗಳನ್ನು ಪಾಲಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೇ, ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಮರೆತು, ತಮಗೆ ಇಚ್ಚೆ ಬಂದಂತೆ ತಿರುಗಾಡುತ್ತ ವಸ್ತುಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯಾಗಿತ್ತು. ಅಲ್ಲದೇ ದ್ವಿ ಚಕ್ರ, ಕಾರು, ಟಂಟಂ ವಾಹನಗಳ ಓಡಾಟವೂ ಕೂಡಾ ಹೆಚ್ಚಾಗಿ ಜನದಟ್ಟಣೆಯಿಂದ ಬಸವೇಶ್ವರ ಮತ್ತು ಕನಕ ವೃತ್ತದಲ್ಲಿ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು.