ಖರೀದಿ ಕೇಂದ್ರ ಆರಂಭಕ್ಕೆ ಕಾಂಗ್ರೆಸ್ ಒತ್ತಾಯ


ದಾವಣಗೆರೆ, ನ.೨: ಮೆಕ್ಕೆಜೋಳ ಮತ್ತು ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಿ, ಅವುಗಳ ಖರೀದಿಗಾಗಿ ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗದಲ್ಲಿಂದು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಖರೀದಿ ಕೇಂದ್ರ ಆರಂಭಿಸಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಉಪ ವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಈ ವರ್ಷ ಉತ್ತಮವಾಗಿ ಮಳೆ ಬಂದಿದ್ದು, ಮೆಕ್ಕೆಜೋಳ ಮತ್ತು ಭತ್ತದ ಇಳುವರಿಯೂ ಚೆನ್ನಾಗಿ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಮತ್ತು ಭತ್ತದ ದರವು ಪಾತಾಳಕ್ಕೆ ಕುಸಿದಿರುವ ಕಾರಣಕ್ಕೆ ರೈತರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ರೈತ ಪರ ಕಾಳಜಿ ಇದ್ದರೆ, ಕ್ವಿಂಟಾಲ್ ಮೆಕ್ಕೆಜೋಳಕ್ಕೆ ೨ ಸಾವಿರ ರೂ. ಮತ್ತು ಭತ್ತ ಕ್ವಿಂಟಾಲ್‌ಗೆ ೨೫೦೦ ರೂ. ಬೆಂಬಲ ಬೆಲೆ ನಿಗದಿ ಮಾಡಿ ತಕ್ಷಣವೇ ಅವುಗಳ ಖರೀದಿಗಾಗಿ ಖರೀದಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಆರ್.ಚಂದ್ರಪ್ಪ, ಕೊಟ್ರೋಶ ನಾಯ್ಕ, ಗುಮ್ಮನೂರು ಶಂಭಣ್ಣ, ಅಣಜಿ ಅಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.