ಖಬರಸ್ತಾನ ವಿರುದ್ಧದ ಹೋರಾಟಕ್ಕೆ ಸಂದ ಜಯ

ಚಿತ್ತಾಪುರ:ನ.11: ಪಟ್ಟಣದ ಮುಸ್ಲಿಂ ಸಮುದಾಯದ ಖಬರಸ್ತಾನ ವಕ್ಫ್ ಮಂಡಳಿ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಯಾಗಿದ್ದು, ಆದರೆ ಇಲ್ಲಿವರೆಗೆ ಕೆಲವರು ಅಕ್ರಮವಾಗಿ ಕಾನೂನು ಬಾಹಿರವಾಗಿ ಒಂದು ಸಮಿತಿ ರಚನೆ ಮಾಡಿಕೊಂಡು ಕೋಟ್ಯಾಂತರ ರೂ. ಅವ್ಯವಹಾರ ನಡೆಸಿದ್ದಾರೆ ಹೀಗಾಗಿ ಕೂಡಲೇ ವಕ್ಫ್ ಮಂಡಳಿ ವಶಕ್ಕೆ ಪಡೆಯಬೇಕು ಎಂದು ಕಳೆದ ಮೂರು ವರ್ಷಗಳಿಂದ ಸತತವಾಗಿ ಹೋರಾಟ ಮಾಡಲಾಗುತ್ತಿತ್ತು, ಪ್ರಸ್ತುತ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿ ಇಲ್ಲಿನ ಖಬರಸ್ತಾನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಹೀಗಾಗಿ ನಮ್ಮ ಹೋರಾಟಕ್ಕೆ ಜಯ ದೊರೆತಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪಠಾಣ ಸೊಫೀಯಾನ್ ಖಾನ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ಪಟ್ಟಣದ ಮುಕ್ತಾರ ಪಟೇಲ್, ಅಬ್ದುಲ್ ರಷೀದ್ ಸೇರಿಕೊಂಟು ಖಬರಸ್ತಾನ ಸಮಿತಿ ರಚಿಸಿಕೊಂಡು ಸ್ಥಳೀಯ ಪುರಸಭೆಯಿಂದ ಹಾಗೂ ಎಂಎಲ್‍ಎ, ಎಂಪಿ ಅನುದಾನ ಪಡೆದುಕೊಂಡು ಬ್ಯಾಂಕ್‍ವೊಂದರಲ್ಲಿ ಜಂಟಿ ಖಾತೆ ತೆಗೆದು ಹಣಕಾಸಿನ ವ್ಯವಹಾರ ನಡೆಸಿದ್ದಾರೆ, ಇವರು ಮುಸ್ಲಿಂ ಸಮುದಾಯಕ್ಕೂ ಹಾಗೂ ಸರಕಾರಕ್ಕೂ ಮೋಸ ಮಾಡಿದ್ದಾರೆ, ಖಬರಸ್ತಾನಕ್ಕೆ ಅಂಟಿಕೊಂಡಂತೆ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿದ್ದಾರೆ ಇದರ ಬಾಡಿಗೆ ಹಣ ಹಾಗೂ ಲೆಕ್ಕಪತ್ರ ನೀಡದೆ ವಂಚಿಸಿದ್ದಾರೆ ಅಲ್ಲದೇ ವಕ್ಫ್ ಮಂಡಳಿಯಿಂದ ಐದು ಬಾರಿ ನೋಟಿಸ್ ನೀಡಿದ್ದರೂ ಸಹ ಇಲ್ಲಿವರೆಗೆ ಲೆಕ್ಕಪತ್ರದ ಮಾಹಿತಿ ನೀಡಿಲ್ಲ ಹೀಗಾಗಿ ಇವರ ಮೇಲೆ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಚಿತ್ತಾಪುರದಲ್ಲಿ ಮುಸ್ಲಿಂರ ಖಬರಸ್ತಾನಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮುಖಂಡರೇ ಅವ್ಯವಹಾರ ನಡೆಸಿದ್ದರೂ ಸಹ ಶಾಸಕ ಪ್ರಿಯಾಂಕ್ ಖರ್ಗೆ ಮಾತ್ರ ಇತ್ತಕಡೆ ಗಮನ ಹರಿಸಿಲ್ಲ, ಇಂತಹವರಿಂದ ಕಾಂಗ್ರೆಸ್ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ ಆದ್ದರಿಂದ ಕೂಡಲೇ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಖಬರಸ್ತಾನ ವಕ್ಫ್ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು ಕಳೆದ 20 ವರ್ಷಗಳಿಂದ ನಡೆಸಿದ ಹಣಕಾಸಿನ ವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಹಾಗೂ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು ಇಲ್ಲದಿದ್ದರೆ ಲೋಕಾಯುಕ್ತರ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಮಹ್ಮದ್ ಅಪ್ಸರ್‍ಸೇಟ್ ನಾಲವಾರ, ಮಹ್ಮದ್ ಅಜಿಮೋದ್ದಿನ್ ಇದ್ದರು.