ಖಣದಾಳ:ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಆಚರಣೆ

ಕಲಬುರಗಿ,ಜ.13-ತಾಲ್ಲೂಕಿನ ಖಣದಾಳ ಗ್ರಾಮದ ಹಿರೇಮಠದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವವನ್ನು ಅನ್ನಪೂರ್ಣ ಪುರಾತನ ಕಲಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಾಗ್ಮಿ ಬಂಡಯ್ಯ ಸ್ವಾಮಿ ಸುಂಟನೂರ ಅವರು ಮಾತನಾಡಿ, “ಒಮ್ಮೆ ತಂದೆ-ತಾಯಿ-ಮಗ ಸಾರೋಟದಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ತಂದೆ ಮಗನಿಗೆ ಕೇಳಿದರು ಮುಂದೆ ನೀನೂ ಏನಾಗುವೆ ಎಂದು ? ಆಗ ಆ ಏಳು ವರ್ಷ ಮಗು ನಾನು ದೊಡ್ಡವನಾದ ಮೇಲೆ ಮುಂದೆ ಕುಳಿತಿರುವವರ ಹಾಗೆ ನಾನೂ ಆಗುವೆ ಎಂದು ಹೇಳಿದ. ಆಗ ತಂದೆ ವಿಶ್ವನಾಥದತ್ತ ಬಹಳ ಕೋಪಗೊಂಡು ತಾಯಿ ಭುವನೇಶ್ವರಿದೇವಿಗೆ ನೀನು ನಿನ್ನ ಮಗನನ್ನು ದೇವಸ್ಥಾನ ಪ್ರವಚನ ಆಧ್ಯಾತ್ಮ ಅಂತ ಕರೆದುಕೊಂಡು ಹೋಗುವೆ ಎಂತಹ ಆಸೆ ಇಟ್ಟುಕೊಂಡಿರುವನು ನೋಡು” ಎಂದು ಬೈಯ್ಯತೊಡಗಿದರು. ಮುಂದೆ ಮನೆಗೆ ಬಂದ ನಂತರ ತಾಯಿ ಮಗನಿಗೆ ತಮ್ಮ ಮನೆಯಲ್ಲಿ ಗೋಡೆಗೆ ಹಾಕಿದ ನಾಲ್ಕು ಕುದರೆಗಳು ಓಡಿಸುತ್ತಿರುವ ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಎಂದು ಬರೆದ ಅರ್ಜುನ ಯುದ್ಧಕ್ಕೆ ಹೊರಡುವ ಮತ್ತು ಶ್ರೀಕೃಷ್ಣನ ಚಿತ್ರವನ್ನು ತೋರಿಸಿ ಹೇಳಿದರು ನೀನೂ ಕುದುರೆ ಓಡಿಸುವುದಿದ್ದರೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಓಡಿಸುವುದಕ್ಕಿಂತ ಧರ್ಮವನ್ನು ಬೆಳೆಸುವುದಕ್ಕಾಗಿ ಶ್ರೀಕೃಷ್ಣನ ಹಾಗೆ ಕುದುರೆ ಓಡಿಸುವಂಥವನಾಗು ಧರ್ಮವನ್ನು ರಕ್ಷಣೆ ಮಾಡು ಎಂದಳು. ಆ ಕ್ಷಣವೇ ತಾಯಿ ಪಾದ ಮುಟ್ಟಿ ಹೇಳಿದ ಧರ್ಮ ರಕ್ಷಣೆಗಾಗಿ ಸಾರಥಿ ನಾ ನಾನಾಗುವೆ ಎಂದು ಪ್ರತಿಜ್ಞೆ ಮಾಡಿ 38 ವರ್ಷದಲ್ಲಿ ಇಡೀ ವಿಶ್ವದ ತುಂಬೆಲ್ಲ ಭಾರತ ಕೀರ್ತಿ ಪತಾಕೆ ಹಾರಿಸಿದರು. ಅವರೆ ನರೇಂದ್ರರು. ಸ್ವಾಮಿ ವಿವೇಕಾನಂದರು ಬಾಲಕರಾದ ಸಮಯದಲ್ಲಿ ತಾಯಿ ನೀಡಿದ ಸಂಸ್ಕಾರ ಅವಿಸ್ಮರಣೀಯ.ನಮ್ಮ ಮಕ್ಕಳಿಗೂ ಇದನ್ನೇ ನಾವು ಉಪದೇಶಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸಿದ್ಧಯ್ಯ ಶಾಸ್ತ್ರಿಗಳು ಸುಂಟನೂರ ಮಾತನಾಡಿದರು .ಗ್ರಾಮದ ಹಿರಿಯರಾದ ಪ್ರಭಾವತಿ ಹಿರೇಮಠ, ಅಂಗನವಾಡಿ ಕಾರ್ಯಕರ್ತೆ ಶಾಕಾಂಬರಿ ಸ್ಥಾವರಮಠ, ಕೊರೊನಾ ವಾರಿಯರ್ಸ್ ಗಳಾದ ಅಶ್ವಿನಿ ಬಸಲಿಂಗಯ್ಯ, ಭಾಗ್ಯಶ್ರೀ, ಗುರು ದೇವಿ, ಅಕ್ಷತಾ ಮಠ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.