ಖಜೂರಿಯಲ್ಲಿ ಹೆಸರಿಗೆ ಮಾತ್ರ ಚೆಕ್‍ಪೋಸ್ಟ್: ಇಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ..!

ಕಲಬುರಗಿ:ನ.28: ಕೊರೋನಾ ರೂಪಾಂತರಿ ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದಾಗ್ಯೂ, ಜಿಲ್ಲೆಯ ಆಳಂದ್ ಗಡಿಯಲ್ಲಿನ ಖಜೂರಿಯಲ್ಲಿ ಹೆಸರಿಗೆ ಮಾತ್ರ ಚೆಕ್‍ಪೋಸ್ಟ್ ನಿರ್ಮಾಣ ಮಾಡಿದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಹಾರಾಷ್ಟ್ರದಿಂದ ಸಾಕಷ್ಟು ವಾಹನಗಳು ಗಡಿ ಜಿಲ್ಲೆಗಳ ಮೂಲಕ ರಾಜ್ಯವನ್ನು ಪ್ರವೇಶಿಸುತ್ತಿವೆ. ಆದಾಗ್ಯೂ, ಚೆಕ್‍ಪೋಸ್ಟ್‍ನಲ್ಲಿ ಕೇವಲ ಒಬ್ಬ ಪೋಲಿಸ್ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿದೆ.
ಆರೋಗ್ಯ ಸಿಬ್ಬಂದಿಯಾಗಲಿ, ಹಿರಿಯ ಅಧಿಕಾರಿಗಳಾಗಲಿ ಯಾರೊಬ್ಬರೂ ಇಲ್ಲಿ ಕಾಣಿಸುತ್ತಿಲ್ಲ. ಚೆಕ್‍ಪೋಸ್ಟ್‍ನಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಇದಕ್ಕೆಲ್ಲ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಮಹಾರಾಷ್ಟ್ರದಿಂದ ಜನ ಅತಿಯಾಗಿ ಆಗಮಿಸಿದ್ದರಿಂದಲೇ ಸೋಂಕು ಸ್ಫೋಟಗೊಂಡು ನಿಯಂತ್ರಣಕ್ಕೆ ತರಲಾಗದೇ ಹಲವು ಸಾವು- ನೋವುಗಳನ್ನು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗಲೂ ಸಹ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಅದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ ಎಂಬುದು ಸಾರ್ವಜನಿಕರ ಅಳಲಾಗಿದೆ.