ಖಂಡ್ರೆ ಅವರ ಪರಿಶ್ರಮ ಪವಿತ್ರವಾಗಿದೆ: ಡಾ.ಖರ್ಗೆ

ಬೀದರ್,ಡಿ 2: ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರ ಪರಿಶ್ರಮ ಅತ್ಯಂತ ಪವಿತ್ರವಾಗಿದೆ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಭಾಲ್ಕಿ ಪಟ್ಟಣದ ಬಿ.ಕೆ.ಐ ಕಾಲೇಜಿನ ಮೈದಾನದಲ್ಲಿ ಇಂದು ಅವರು ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ಹೆಚ್ಚು ಆಯುಷ್ಯ ಇರಲು ಅಸಾಧ್ಯ. ಅಂಥದರಲ್ಲಿ ಭೀಮಣ್ಣ ಖಂಡ್ರೆ ಅವರು ಶತಾಯುಷಿಗಳಾಗಿ ಬಾಳಿ ಬದುಕಿರುವುದು ಅಭಿಮಾನದ ಸಂಗತಿ ಎಂದರು.
ಡಾ.ಖಂಡ್ರೆ ಅವರದು ಹಾಗೂ ನಮ್ಮ ವಿಚಾರಗಳಲ್ಲಿ ವ್ಯತ್ಯಾಸವಿದ್ದರೂ ಗುರಿ ಮತ್ತು ಮಾರ್ಗ ಮಾತ್ರ ಒಂದೆ ಆಗಿದೆ. ಹೀಗಾಗಿ ನಾವಿಬ್ಬರು ಒಂದೆ ಪಕ್ಷದಲ್ಲಿ ಹೆಚ್ಚು ಕಾಲ ಗುರ್ತಿಸಲು ಸಾಧ್ಯವಾಯಿತು ಎಂದರು.
ಡಾ.ಖಂಡ್ರೆ ಅವರು ಕೇವಲ ರಾಜಕೀಯವಾಗಿ ಗುರ್ತಿಸಿಕೊಳ್ಳದೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಅಧ್ಯಾತ್ಮಿಕವಾಗಿ ಮೇರು ಶಿಖರಕ್ಕೆ ಏರಿದರು. ಅವರ ಪೂಜ್ಯ ಗುರುಗಳಾದ ಡಾ.ಚನ್ನಬಸವ ಪಟ್ಟದ್ದೇವರ ಪರಮಾಶೀರ್ವಾದ ಹಾಗೂ ಮಾರ್ಗದರ್ಶನದಿಂದ ಸಜ್ಜನ ರಾಜಕಾರಣಿಯಾಗಿ ಈ ನಾಡಿಗೆ ಪರಿಚಯವಾದರು. ಅವರ ಆದರ್ಶ ಇಂದು ಎಲ್ಲ ರಾಜಕಾರಣಿಗಳಿಗೆ ಮಾರ್ಗದರ್ಶನವಾಗಿದೆ. ಅವರ ಮಾರ್ಗದಲ್ಲಿ ಅವರ ಸುಪುತ್ರರಾದ ರಾಜ್ಯದ ಪರಿಸರ, ಅರಣ್ಯ ಹಾಗೂ ಜೀವಶಾಸ್ತ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರು ನಡೆದು ತೋರಿಸುತ್ತಿದ್ದಾರೆ. ಡಾ.ಭೀಮಣ್ಣ ಖಂಡ್ರೆ ಅವರಿಗೆ ಪರಮಾತ್ಮ ಇನ್ನು ಆಯುಷ್ಯ ಹಾಗೂ ಆರೋಗ್ಯ ದಯಪಾಲಿಸಲಿ ಎಂದರು.
ಸಿರಿಗೆರೆ ಶ್ರೀಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಕೇಂದ್ರ ಮಾಜಿಸಚಿವ ವೀರಪ್ಪ ಮೊಯ್ಲಿ ಅವರು ಮಾತನಾಡಿದರು.ರಾಜ್ಯದ ಪರಿಸರ, ಅರಣ್ಯ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗೋ.ರು ಚನ್ನಬಸಪ್ಪ ಅವರು ಅಭಿನಂದನಾ ನುಡಿ ನುಡಿದರು.
ಸುತ್ತೂರು ಶ್ರೀಗಳು, ಶ್ರೀಶೈಲ ಜಗದ್ಗುರುಗಳು, ಕಾಗಿನೆಲೆ ಶ್ರೀಗಳು, ಇಳಕಲ್ ಅಪ್ಪಗಳು, ತುಮಕೂರು ಶ್ರೀಗಳು, ಮೌಲ್ವಿಗಳು, ಭಂತೇಜಿ, ರಾಬರ್ಟ್ ಮಿರಂಡಾ ಪಾದ್ರಿ ಸೇರಿದಂತೆ ಎಲ್ಲ ಧರ್ಮಗಳ ಧರ್ಮಗುರುಗಳು ಸಾನಿಧ್ಯ ವಹಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಕನಾಯಕ ಭೀಮಣ್ಣ ಖಂಡ್ರೆ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದರು.
ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ರಾಜ್ಯದ ಹಿರಿಯ ಸಚಿವರಾದ ಹೆಚ್.ಕೆ ಪಾಟೀಲ, ಬಸವರಾಜ ರಾಯರೆಡ್ಡಿ, ಕೆ.ಜೆ ಜಾರ್ಜ್, ಚಂದ್ರಪ್ಪ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಸಚಿವರು, ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರುಗಳು ಹಾಗೂ ಮಾಜಿ ಎಮ್.ಎಲ್.ಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.