ಖಂಡ್ರೆ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಖೂಬಾ

ಬೀದರ್,ಫೆ.19-ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರಿಗೆ ನನ್ನ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲಾ, ತನ್ನ ವಿಫಲತೆಗಳನ್ನು ಮುಚ್ಚಿಕೊಳ್ಳಲು ನನ್ನ ಬಗ್ಗೆ ಆರೋಪ ಮಾಡುತ್ತಿರುವುದು ಅವರ ಯೋಗ್ಯತೆ ಎತ್ತಿ ತೋರಿಸುತ್ತದೆ ಎಂದು ಕೆಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಮಂತ್ರಿಗಿರಿ ಬೇಕಾದಾಗ, ವೀರಶೈವ ಲಿಂಗಾಯತ ಸ್ವಾಮೀಜಿಯವರ ಸಹಾಯ ಬೇಕಾಗಿತ್ತು, ಆದರೆ ಇಂದು ಬಸವಣ್ಣನವರ ನೂತನ ಅನುಭವ ಮಂಟಪಕ್ಕೆ, ಬಜೆಟ್‍ನಲ್ಲಿ ಅನುದಾನ ಪಡೆದುಕೊಳ್ಳಲು ಆಗಿಲ್ಲ, ಹಾಗೆ ಒಬ್ಬ ಹಿಂದುವಾಗಿ ಬಸವಕಲ್ಯಾಣದಲ್ಲಿ ಹಿಂದು ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ ನಿರ್ಮಾಣಕ್ಕೆ ಅನುದಾನ ಕೊಡಿಸಲು ಆಗದೆ ಇರುವ ಖಂಡ್ರೆಯವರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಬಸವಕಲ್ಯಾಣದ ನೂತನ ಅನುಭವ ಮಂಟಪಕ್ಕೆ ರೂ 200 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಶಿವಾಜಿ ಪಾರ್ಕ ನಿರ್ಮಾಣಕ್ಕೆ 10 ಎಕ್ಕರೆ ಭೂಮಿ ಕೊಡಿಸಲಾಗಿದೆ. ಹಿಂದೂ ಸಮಾಜಕ್ಕೆ ನಿಮ್ಮ ಹಾಗೂ ನಿಮ್ಮ ಸರ್ಕಾರದ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ನೂತನ ಅನುಭವ ಮಂಟಪದ ವಿಷಯದಲ್ಲಿ ಕಳೆದ ಬಾರಿ ಮುಖ್ಯಮಂತ್ರಿ ಇದ್ದಾಗಲು ಸಿದ್ದರಾಮಯ್ಯನವರಿಗೆ ಖಂಡ್ರೆ ಅವರ ಜೊತೆ ಸೇರಿ ನಾವೆಲ್ಲರೂ ಭೇಟಿ ಮಾಡಿ ಮನವಿ ಮಾಡಿದ್ದಾಗಲು, ಸಿದ್ದರಾಮಯ್ಯನವರು ನಮ್ಮ ಮನವಿ ತಿರಸ್ಕರಿದ್ದರು, ಇವಾಗಲು ಅದೇ ಧೋರಣೆ ತೋರುತ್ತಿದ್ದಾರೆ, ಇವರಿಗೆ, ಇವರ ಸರ್ಕಾರಕ್ಕೆ ಹಿಂದುಗಳು, ಲಿಂಗಾಯತರು ಎಂದರೆ ಅದೇನೋ ಮಲತಾಯಿ ಪ್ರೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯವರು ಜಿ.ಎಸ್.ಟಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದರೆ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋಗಲಿ, ಅದು ಬಿಟ್ಟು ಚುನಾವಣೆ ಸಮಯದಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡುವುದು ನಿಲ್ಲಿಸಲಿ ಎಂದಿದ್ದಾರೆ.
ಬೀದರ್ ವಿಮಾನಯಾನಕ್ಕೆ ಈಶ್ವರ ಖಂಡ್ರೆಯವರದ್ದು ನಯಾಪೈಸೆ ಕೊಡುಗೆಯಿಲ್ಲ, ಈ ಹಿಂದೆಯು ಉಸ್ತುವಾರಿ ಮಂತ್ರಿಯಿದ್ದಾಗ ಯಾವೂದೇ ಸಹಕಾರ ನೀಡಿರಲಿಲ್ಲಾ, ನಂತರ ನಮ್ಮ ಸರ್ಕಾರ ಬಂದ ಮೇಲೆ ನಮ್ಮದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದ್ದ ಕಾರಣ ಜಿಲ್ಲೆಯಲ್ಲಿ ಏಪೆರ್Çೀರ್ಟ್ ಪ್ರಾರಂಭಿಸಲು ಅನುಕೂಲವಾಯಿತು, ಇವಾಗ ಸದರಿ ಕಂಪನಿಯವರ ಅಗ್ರಿಮೆಂಟ್ ಮುಗಿದಿದ್ದರಿಂದ ಬಂದಾಗಿದೆ, ಪುನರ್ ಸೇವೆ ಪ್ರಾರಂಭಿಸಲು ನಾನು ಈಗಾಗಲೆ ಕೇಂದ್ರ ವಿಮಾನಯಾನ ಸಚಿವರ ಜೊತೆ ವಿಮಾನಯಾನ ಕಂಪನಿಯವರೊಂದಿಗೆ ಮಾತುಕತೆ ನಡೆದಿದೆ, ಶೀಘ್ರದಲ್ಲೇ ಪುನರ್ ಪ್ರಾರಂಭಗೊಳ್ಳಲಿದೆ ಎಂದು ಸಚಿವ ಖೂಬಾ ತಿಳಿಸಿದ್ದಾರೆ.
ನಾನು ತಂದಿರುವ ಯೋಜನೆಗಳ ಮೇಲೆ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದ ಅನುಕೂಲ ಪಡೆದುಕೊಳ್ಳುವುದು ಹಾಗೂ ನಾನು ಮಾಡಿಸಿರುವ ಕೆಲಸಗಳನ್ನು ತಾನೇ ಮಾಡಿಸಿದ್ದೇನೆ ಎಂದು ಸುಳ್ಳು
ಹೇಳಿಕೊಂಡು ತಿರುಗಾಡುವುದೇ ಖಂಡ್ರೆಯವರ ಕಾಯಕವಾಗಿದೆ ಎಂದಿದ್ದಾರೆ.
60 ವರ್ಷದಿಂದ ಬೀದರ್ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಮಾಡಿಕೊಂಡು ಒಬ್ಬರಾದ ಮೇಲೆ ಒಬ್ಬರು ಅಧಿಕಾರಕ್ಕೆ ಬರುತ್ತಿರುವ ಈಶ್ವರ್ ಖಂಡ್ರೆ ಅವರು, ಟೀಕೆಗಳಿಗೆ ಉತ್ತರಿಸುವ ಭರದಲ್ಲಿ ಸುಳ್ಳು
ಆರೋಪಗಳು ಮಾಡುವುದು ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದಿದ್ದಾರೆ.