ಖಂಡ್ರೆಯವರು ಶುಗರ್ ಮಿಲ್ ಮೇಲೆ 400 ಕೋಟಿ ಸಾಲ ಪಡೆದು ಮುಳುಗಿಸಿದ್ದಾರೆ: ಖೂಬಾ

ಬೀದರ್:ಆ.26: ಜಿಲ್ಲೆಯ ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಅವರ ಕುಟುಂಬ ಸದಸ್ಯರು ಶ್ರೀಮಂತರಾಗಿದ್ದಾರೆ. ಆದರೆ, ಆ ಕಾರ್ಖಾನೆಯ ಮೇಲೆ ಸಾಲ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆರೋಪಿಸಿದ್ದಾರೆ.
ರೈತರಿಗಾಗಿ ಪ್ರಾರಂಭವಾದ ಗಾಂಧಿ ಸಕ್ಕರೆ ಕಾರ್ಖಾನೆ ಹೆಸರಲ್ಲಿ ಡಿ.ಸಿ.ಸಿ. ಬ್ಯಾಂಕಿನಿಂದ ?400 ಕೋಟಿ ಸಾಲ ಪಡೆದು, ಆ ಸಾಲ ತೀರಿಸಿಲ್ಲ. ಈಗ ಅದನ್ನು ಮುಳುಗಿಸುತ್ತಿದ್ದಾರೆ. ಅವರ ಸಹೋದರ ಅಮರ ಖಂಡ್ರೆಯವರನ್ನು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾಗಿಸಲು ಪ್ರಚಾರ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರ, ಕೆಟ್ಟ ಸಂಸ್ಕøತಿಯನ್ನು ಎತ್ತಿ ತೋರಿಸುತ್ತದೆ ಎಂದು ಖೂಬಾ ಅವರು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನಪ್ರತಿನಿಧಿ ಆದವರಿಂದ ಜನರು ಪಾರದರ್ಶಕ ಆಡಳಿತ ಬಯಸುತ್ತಾರೆ. ಈ ನಿಟ್ಟಿನಲ್ಲಿ ಖಂಡ್ರೆ ಅವರಲ್ಲಿ ನೈತಿಕತೆ ಉಳಿದಿಲ್ಲ. ಕಳೆದ ಕೆಲವು ತಿಂಗಳ ಹಿಂದೆ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ್ ಮುನೇನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ, ಖಂಡ್ರೆ ಕುಟುಂಬ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಗಾಂಧಿ ಸಕ್ಕರೆ ಕಾರ್ಖಾನೆ ಮೇಲೆ ?400 ಕೋಟಿ ಸಾಲವಿದೆ. ಅದು ಡಿ.ಸಿ.ಸಿ. ಬ್ಯಾಂಕಿನಿಂದ ತೆಗೆದುಕೊಳ್ಳಲಾಗಿದೆ ಎಂದು ನಾನು ವಿಷಯ ಪ್ರಸ್ತಾಪಿಸಿದ್ದೆ. ಆದರೆ, ಕಾರ್ಖಾನೆಗೂ ಹಾಗೂ ಅದರ ಅಧ್ಯಕ್ಷರಾಗಿರುವ ನನ್ನ ಸಹೋದರನಿಗೂ ಯಾವುದೇ ಸಂಬಂಧವಿಲ್ಲವೆಂದು ಖಂಡ್ರೆಯವರು ಹೇಳಿದ್ದರು ಎಂದು ನೆನಪಿಸಿದ್ದಾರೆ.
ಅಧಿಕಾರ ದುರ್ಬಳಕೆ ಮಾಡಿಕೊಂಡು, ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವ ಬೀದರ್ ಡಿ.ಸಿ.ಸಿ. ಬಾಂಕ್ ಕಸಿದುಕೊಳ್ಳಲು ಹಲವಾರು ರೀತಿಯ ಹೊಂಚು ಹಾಕುತ್ತಿದ್ದಾರೆ. ಜಿಲ್ಲೆಯ ರೈತರು ಅವರಿಗೆ ಅವಕಾಶ ಮಾಡಿಕೊಡಬಾರದು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಖಂಡ್ರೆಯವರು ಬಹಳ ಆಸ್ತಿ ಹೊಂದಿದ್ದಾರೆ. ಸಾವಿರಾರು ಎಕರೆ ಭೂಮಿ ಯಾರ ಬಳಿಯೂ ಇಲ್ಲ. 20 ಅಡಿ ಎತ್ತರದ ಕಾಂಪೌಂಡ್‍ಗಳನ್ನು ನಿರ್ಮಿಸಿದ್ದಾರೆ. ಈ ಆಸ್ತಿಯ ಆದಾಯ ಮೂಲ ಯಾವುದು? ಅದನ್ನು ಸಮಾಜದ ಮುಂದಿಡಿ. ಶ್ರೀಮಂತರಾಗಲು ಹಿಡಿದ ಮಾರ್ಗ ಯಾವುದು? ಇದನ್ನೆಲ್ಲ ಜನರಿಗೆ ತಿಳಿಸಿ ಎಂದು ಖೂಬಾ ಸವಾಲು ಹಾಕಿದ್ದಾರೆ.
ನಾಲ್ಕೈದು ಜನ ಗುತ್ತಿಗೆದಾರರನ್ನು ಇಟ್ಟುಕೊಂಡು, ಅವರಿಗೆ ಎಲ್ಲಾ ಕೆಲಸಗಳನ್ನು ಸಿಗುವ ಹಾಗೆ ಖಂಡ್ರೆಯವರು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರ ಹಿಂದಿನ ಗುಟ್ಟೇನು? ಕಸಿದುಕೊಂಡು ತಿನ್ನುವವರಿಗೆ, ದುಡಿದು ತಿನ್ನುವವರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿರಲ್ಲ. ನಿಮ್ಮ ಭ್ರಷ್ಟಾಚಾರ, ದುರಾಡಳಿತ ಜಿಲ್ಲೆಯ ಜನತೆ ಗಮನಿಸುತ್ತಿದ್ದಾರೆ. ಸೂಕ್ತ ಸಮಯಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.
ಖಂಡ್ರೆಯವರು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಭ್ರಷ್ಟಾಚಾರ, ದುರಾಡಳಿತ, ಸ್ವಜನಪಕ್ಷಪಾತ, ಓಲೈಕೆ ರಾಜಕಾರಣ ಜನರ ಮಧ್ಯದಲ್ಲಿ ಇಡುತ್ತಿದ್ದೇನೆ ಎಂದು ತಿಳಿದು, ದುಡಿದು ತಿನ್ನುತ್ತಿರುವ ನಮ್ಮ ಕುಟುಂಬ ಸದಸ್ಯರನ್ನು ಅನವಶ್ಯಕವಾಗಿ ಎಳೆದು ತರುತ್ತಿದ್ದಾರೆ. ನಾನೆಂದೂ ನಮ್ಮ ಪರಿವಾರದವರನ್ನು ಯಾವ ವಿಷಯದಲ್ಲೂ ಸಹಕರಿಸುವ ಕೆಲಸ ಮಾಡಿಲ್ಲ. ನಮ್ಮ ಕುಟುಂಬದವರು ಕೆಲಸ ಮಾಡಲು ಯೋಗ್ಯರಿದ್ದಾರೆ. ಅವರ ಯೋಗ್ಯತೆ ಮೇಲೆ ಅವರ ಕೆಲಸಗಳು ಅವರವರು ಮಾಡಿಕೊಂಡು ಬದುಕುತ್ತಿದ್ದಾರೆ ಎಂದು ಖಂಡ್ರೆಯವರಿಗೆ ತಿರುಗೇಟು ನೀಡಿದ್ದಾರೆ.