ಖಂಡಾಂತರ ಕ್ಷಿಪಣಿ ಉಡಾಯಿಸಿದ ಉ.ಕೊರಿಯಾ

ಸಿಯೋಲ್ (ದ.ಕೊರಿಯಾ), ಮಾ.೧೬- ದಕ್ಷಿಣ ಕೊರಿಯಾ ಹಾಗೂ ಜಪಾನ್ ನಡುವಿನ ಮಹತ್ವಪೂರ್ಣ ಶೃಂಗಸಭೆ ಹಿನ್ನೆಲೆಯಲ್ಲಿ ಮುಂಜಾನೆ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ (ಐಸಿಬಿಎಮ್) ಉಡಾಯಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ. ಉತ್ತರ ಕೊರಿಯಾ ಕ್ಷಿಪಣಿ ಪ್ರಯೋಗಿಸಿದ ವಿಚಾರವನ್ನು ದಕ್ಷಿಣ ಕೊರಿಯಾ ಹಾಗೂ ಜಪಾನ್ ಇಂದು ಬೆಳಗ್ಗೆ ಅಧಿಕೃತವಾಗಿ ಖಚಿತಪಡಿಸಿದೆ.
ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೆಯೊಲ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ನಡುವೆ ಮಹತ್ವಪೂರ್ಣ ಸಭೆ ನಡೆಯಲಿದೆ. ಈ ಸಭೆಗೆ ಖಂಡನೆ ವ್ಯಕ್ತಪಡಿಸುತ್ತಾ ಇದೀಗ ಉತ್ತರ ಕೊರಿಯಾ ಐಸಿಬಿಎಮ್ ಕ್ಷಿಪಣಿ ಪ್ರಯೋಗಿಸಿದೆ. ಇನ್ನು ಕಳೆದೊಂದು ವಾರದಲ್ಲಿ ಇದು ಉತ್ತರ ಕೊರಿಯಾ ಪ್ರಯೋಗಿಸಿದ ನಾಲ್ಕನೇ ಕ್ಷಿಪಣಿಯಾಗಿದೆ. ಸದ್ಯ ಪ್ರಯೋಗಿಸಿದ ಕ್ಷಿಪಣಿಗೆ ಹೋಲಿಕೆ ಮಾಡಿದರೆ ಮೊದಲಿನ ಮೂರು ಕ್ಷಿಪಣಿಗಳು ಅಲ್ಪಶ್ರೇಣಿಯನ್ನು ಹೊಂದಿದೆ. ಆದರೆ ಸದ್ಯ ಉಡಾಯಿಸಿದ ಐಸಿಬಿಎಮ್ ಕ್ಷಿಪಣಿ ಸುಮಾರು ೧೦೦೦ ಕಿ.ಮೀ. ದೂರ ಚಲಿಸಿದ್ದು, ಬಳಿಕ ಜಪಾನ್‌ನ ಪಶ್ಚಿಮದ ಕಡಲಿಗೆ ಅಪ್ಪಳಿಸಿದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಕಳೆದ ಐದು ವರ್ಷಗಳಲ್ಲೇ ಮಿತ್ರರಾಷ್ಟ್ರಗಳ ನಡುವಿನ ಅತೀ ದೊಡ್ಡ ಸಮರಾಭ್ಯಾಸ ಎಂದು ಕರೆಸಿಕೊಂಡಿರುವ ಅಮೆರಿಕಾ ಹಾಗೂ ದಕ್ಷಿಣ ಕೊರಿಯಾ ನಡುವಿನ ಮಿಲಿಟರಿ ಸಮರಾಭ್ಯಾಸ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಈಗಾಗಲೇ ಕ್ಷಿಪಣಿ ಉಡಾಯಿಸಿದೆ. ಅಮೆರಿಕಾ-ದಕ್ಷಿಣ ಕೊರಿಯಾ ನಡುವಿನ ಸಮರಾಭ್ಯಾಸವನ್ನು ಉತ್ತರ ಕೊರಿಯಾವು ಪ್ರಚೋದನೆ ಎಂದು ಕರೆದುಕೊಂಡಿದೆ. ಅಲ್ಲದೆ ಸದ್ಯ ಜಪಾನ್ ಹಾಗೂ ದಕ್ಷಿಣ ಕೊರಿಯಾ ನಡುವಿನ ಮಹತ್ವಪೂರ್ಣ ಶೃಂಗಸಭೆಗೂ ಉತ್ತರ ಕೊರಿಯಾ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪ್ರಯೋಗಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ. ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಉತ್ತರ ಕೊರಿಯಾ ಐಸಿಬಿಎಮ್ ಕ್ಷಿಪಣಿ ಪ್ರಯೋಗಿಸಿತ್ತು. ಬಳಿಕ ಕ್ಷಿಪಣಿ ಪ್ರಯೋಗ ಹಿನ್ನೆಲೆಯಲ್ಲಿ ಜಿ-೭ ರಾಷ್ಟ್ರ ಹಾಗೂ ವಿಶ್ವಸಂಸ್ಥೆಯ ತುರ್ತುಸಭೆಯಲ್ಲಿ ಉತ್ತರ ಕೊರಿಯಾ ವಿರುದ್ಧ ಭಾರೀ ಖಂಡನೆ ವ್ಯಕ್ತವಾಗಿತ್ತು.