
ಬ್ಯಾಡಗಿ,ಮೇ.6: ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡ ಭಾಷಿಕರು ಬೇರೆ ಭಾಷೆ ಹಾಗೂ ಆಡಳಿತದ ಅಧೀನದಲ್ಲಿದ್ದರು. ಈ ಸಂಕಟದಿಂದ ಹೊರಬರಲು ಕನ್ನಡ ಭಾಷೆ, ಪ್ರದೇಶ, ಸಂಸ್ಕೃತಿಯನ್ನು ಒಗ್ಗೂಡಿಸುವ, ಅದನ್ನು ರಕ್ಷಿಸಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು, ಅಂತಹ ಸಮಯದಲ್ಲಿ ಕನ್ನಡ ಕಟ್ಟು ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ಸಂದರ್ಭದಲ್ಲಿ ಪ್ರಮುಖವಾಗಿ ನೆನೆಯಬೇಕು ಎಂದು ಸಾಹಿತಿ ಮತ್ತು ಕಲಾವಿದರಾದ ಜಮೀರ್ ರಿತ್ತಿ ಹೇಳಿದರು.
ಪಟ್ಟಣದ ಕಸಾಪ ಭವನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ನಡೆದ 109ನೆಯ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಅದು ಬೆಳೆದು ಬಂದ ದಾರಿಯ ಕುರಿತು ಜೊತೆಗೆ ನಾಡುನುಡಿ, ನೆಲಜಲ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ವಿವರಿಸಿದರಲ್ಲದೇ, ಈವರೆಗೂ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಮಾಡಿ ನಾಡಿನ ಶ್ರೇಷ್ಠತೆಗೆ ಅವಿರತವಾಗಿ ಶ್ರಮಿಸುತ್ತಿರುವ ಮಹಾನ್ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಹಿರಿಯರಾದ ರಾಮರಾಯ ಗುಡಗೂರು ಅವರು, ಕನ್ನಡ ಸಾಹಿತ್ಯ ಪರಿಷತ್ತು ನೀಡಿದ ಕೊಡುಗೆಯನ್ನು ಸ್ಮರಿಸಿದರಲ್ಲದೇ, ಸಾಹಿತ್ಯ ಸಮ್ಮೇಳನಗಳು ಉತ್ಸವಗಳಾಗದೇ, ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸರ್ಕಾರದ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರಲು ಒತ್ತಡ ತರುವ ಕೆಲಸ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕ ರಾಜಶೇಖರ ಹೊಸಳ್ಳಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರಾಚಾರ್ಯ ಆನಂದ ಮುದುಕಮ್ಮನವರ ಆಗಮಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಎಸ್.ಬಿ.ಇಮ್ಮಡಿ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಎಚ್.ವಾಯ್. ಓಲೇಕಾರ ವಂದಿಸಿದರು.