ಕ.ಸಾ.ಪ ಚುನಾವಣೆ 2ನೇ ಬಾರಿ ಕಣಕ್ಕಿಳಿಯಲು ಕಲ್ಮಠ್ ಗೆ ಒತ್ತಾಯ

ಬಳ್ಳಾರಿ, ಏ.02: ಮುಂದಿನ ತಿಂಗಳು 9ರಂದು ನಡೆಯಲಿರುವ ಕ.ಸಾ.ಪ ಚುನಾವಣೆಯಲ್ಲಿ 2ನೇ ಬಾರಿಗೆ ಜಿಲ್ಲಾ ಅಧ್ಯಕ್ಷರಾಗಲು ಮತ್ತೊಮ್ಮೆ ಕಮಕ್ಕಿಳಿಯಬೇಕೆಂದು ಸಿದ್ದರಾಮ ಕಲ್ಮಠ ಅವರಿಗೆ ಒತ್ತಾಯ ಮಾಡಿದ್ದು ಕಂಡುಬಂತು.
ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ಇಂದು ಬೀಳ್ಕೊಡುಗೆ ಸಮಾರಂಭ ನಗರದ ಕನ್ನಡ ಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಭಾಗವಹಿಸಿದ ಬಹುತೇಕರು ನೀವೇ ನಮ್ಮ ತಂಡದಿಂದ ಮತ್ತೊಮ್ಮೆ ಕಣಕ್ಕಿಳಿಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಲ್ಮಠ ಅವರು ನಮ್ಮ ತಂಡವನ್ನು ಹೀಗೆ ಮುಂದುವರಿಸಿಕೊಂಡು ಹೋಗೋಣ ಅದರಲ್ಲಿ ಎರಡು ಮಾತಿಲ್ಲ. ಬೇರೆಯವರಿಗೂ ಅವಕಾಶ ನೀಡೋಣ ಎಂದರಲ್ಲದೆ ಅನಿವಾರ್ಯ ಎಂದರೆ ಆ ಬಗ್ಗೆ ಚಿಂತನೆ ಮಾಡಲು ಒಂದಿಷ್ಟು ಕಾಲಾವಕಾಶ ನೀಡಿ ಒಂದೆರೆಡು ದಿನದಲ್ಲಿ ಅಂತಿಮ ತೀರ್ಮಾನಕ್ಕೆ ಬರುವೆ ಎಂದಿದ್ದಾರೆ.
ಸಭೆಯಲ್ಲಿ ರಮೇಶಗೌಡ ಪಾಟೀಲ್, ಟಿ.ಪಂಪಾಪತಿ, ಪುರುಷೋತ್ತಮ ಹಂದ್ಯಾಳ್, ರಾಮಚಂದ್ರ, ರಮಣಪ್ಪ, ಡಾ.ಕೆ.ಬಸಪ್ಪ, ಎಂ.ಪಿ.ಎಂ. ಮಂಜುನಾಥ, ಗೌರಿ ಶಂಕರಸ್ವಾಮಿ ಮೊದಲಾದವರು ಇದ್ದರು. ಆದರೆ ಕಳೆದ ಬಾರಿಯಂತೆ ಹೆಚ್ಚಿನ ಜನ ಈ ಬಾರಿ ಕಂಡುಬಂದಿಲ್ಲ. ಕಾರಣ ಹಲವು ಗುಂಪುಗಳಿಗೆ ಚದುರಿರುವುದಾಗಿದೆ.
ಸೋಮವಾರ
ಈ ಮಧ್ಯೆ 3ನೇ ಬಾರಿಗೆ ಅಧ್ಯಕ್ಷರಾಗಲು ಸ್ಪರ್ಧಾ ಕಣಕ್ಕೆ ಇಳಿಯಲು ನಿರ್ಧರಿಸಿರುವ ನಿಷ್ಠಿರುದ್ರಪ್ಪ ಅವರು, ಇಂದು ಸಂಜೆ ಗಾಂಧಿಭವನದಲ್ಲಿ ಸಮಾನ ಮನಸ್ಸಿನ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಕರೆದಿದ್ದು ಏ.5ರಂದು ಸೋಮವಾರದಂದು ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರಂತೆ.