ಕ.ವಿ.ವ. ಶಿಕ್ಷಕೇತರ ನೌಕರರ ಸಂಘದ ಪ್ರತಿಭಟನೆ

(ಸಂಜೆವಾಣಿ ನ್ಯೂಸ್)
ಧಾರವಾಡ,ಆ5: ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ವತಿಯಿಂದ ಕವಿವಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸರಕಾರ ಆದೇಶಿಸಿದಂತೆ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕೇತರ ನೌಕರರಿಗೆ ವಿವಿಯ ಆಂತರಿಕ ಸಂಪನ್ಮೂಲದಿಂದ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಲಾಯಿತು. ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿಗೆ ಮಧ್ಯಂತರ ಪರಿಹಾರ ನೀಡಲಾಗುತ್ತಿದ್ದು, ನಮ್ಮ ವಿಶ್ವವಿದ್ಯಾಲಯದಲ್ಲಿ ಕೂಡ ಮಧ್ಯಂತರ ಪರಿಹಾರ ವಿತರಿಸಬೇಕೆಂದು ಆಗ್ರಹಿಸಲಾಯಿತು. ಹಲವು ಬಾರಿ ಕವಿವಿ ಕುಲಸಚಿವರೊಂದಿಗೆ ಚರ್ಚಿಸಿದ್ದರೂ ಭರವಸೆ ಈಡೇರಿಲ್ಲ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆರ್.ಎಂ. ಸವಣೂರ, ಆನಂದ ಬೆಣ್ಣಿ, ಎ.ಬಿ. ನೇಗಿನಹಾಳ, ಆತೀಶ ತಿವಾರಿ, ಆರ್.ಟಿ. ಮಾಡಿಕ, ಪಿ.ವಿ. ಕಟಗಿ ಮೊದಲಾದವರಿದ್ದರು.