ಕ.ರಾ.ಪ್ರೌ.ಶಿ. ಸಂಘದ ಅಧ್ಯಕ್ಷರಾಗಿ ಪ್ರಭುಲಿಂಗ ಗದ್ದಿ, ಕಾರ್ಯದರ್ಶಿಯಾಗಿ ರವೀಂದ್ರಗೌಡ ಆಯ್ಕೆ

ರಾಯಚೂರು, ಜು. ೧೮- ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರಭುಲಿಂಗ ಗದ್ದಿ ಕಾರ್ಯದರ್ಶಿಯಾಗಿ ರವೀಂದ್ರಗೌಡ ಆಯ್ಕೆಯಾಗಿದ್ದಾರೆ.
ನಗರದ ನೀಲಕಂಠೇಶ್ವರ ನಗರದಲ್ಲಿರುವ ಸರಕಾರಿ ನೌಕರರ ಗೃಹನಿರ್ಮಾಣ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಯಚೂರು ಜಿಲ್ಲಾ ಘಟಕಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಭುಲಿಂಗ ಗದ್ದಿ ಅವರು ೪೧ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.ಇವರ ಪ್ರತಿಸ್ಪರ್ಧಿ ಆಂಜನೇಯ ಇಡಪನೂರು ೨೬ ಮತಗಳನ್ನಷ್ಟೇ ಗಳಿಸಲು ಶಕ್ತರಾಗಿ ಪರಾಭವಗೊಂಡರೆ, ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿಂಧನೂರಿನ ರವೀಂದ್ರಗೌಡ ೩೯ ಮತ ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ಮೊಹಿನುಲ್ ಹಕ್ ೨೭ ಮತಗಳ ಪಡೆದು ಸೋಲನ್ನೊಪ್ಪಿಕೊಂಡರು.
ಚುನಾವಣಾಧಿಕಾರಿಯಾಗಿ ಬಾಬು ಬಂಡಾರ್‌ಗಲ್, ಸಹಾಯಕ ಚುನಾವಣಾಧಿಕಾರಿಯಾಗಿ ಸಂಗಯ್ಯಸ್ವಾಮಿ ಸೊಪ್ಪಿಮಠ ಕಾರ್ಯ ನಿರ್ವಹಿಸಿದರು. ಗೆಲುವು ಸಾಧಿಸಿದ ಪ್ರಭುಲಿಂಗ ಗದ್ದಿ ಹಾಗೂ ರವೀಂದ್ರಗೌಡ ಅವರಿಗೆ ಮಾಜಿ ಜಿಲ್ಲಾ ಕಾರ್ಯದರ್ಶಿ ಡಿ. ವೆಂಕಟೇಶ ಜಾಲಿಬೆಂಚಿ ಅವರು ಸೇರಿದಂತೆ ಗೆಲುವಿಗೆ ಶ್ರಮಿಸಿದ ನಿರ್ದೇಶಕರು ಅಭಿನಂದನೆ ಸಲ್ಲಿಸಿದರು.