ಕ.ಕ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ

ಕಲಬುರಗಿ,ಏ.25: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ನಾವು ಹಿಂದುಳಿದವರು, ನಮ್ಮಿಂದ ಉನ್ನತ ಸಾಧನೆ ಅಸಾಧ್ಯ ಎಂಬ ಮನೋಭಾವನೆ ಬೇಡ. ನಿರಂತರ ಅಧ್ಯಯನಶೀಲತೆ, ಸಮಯದ ಸೂಕ್ತ ಬಳಕೆ, ಬದ್ದತೆ, ಧನಾತ್ಮಕ ಚಿಂತನೆ, ಶಿಸ್ತುಬದ್ಧ ಅಧ್ಯಯನದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಕರು, ಪಾಲಕ-ಪೋಷಕರು ಸೂಕ್ತ ಮಾರ್ಗದರ್ಶನ ಮಾಡಬೇಕು. ಆಗ ನಮ್ಮ ಭಾಗದ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಗುವಿಯ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ಜೇವರ್ಗಿ ಪಟ್ಟಣದ ಬಸ್ ಸ್ಟಾಂಡ್ ಎದುರುಗಡೆಯಿರುವ ‘ನರೇಂದ್ರ ಪಿಯು ಕಾಲೇಜ್’ನಲ್ಲಿ ಉತ್ತಮ ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾಲೇಜಿನ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಪ್ರತಿಭಾ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ದೇವಿಂದ್ರ ಬಿ.ಗುಡೂರ್ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಬಡ, ಪ್ರತಿಭಾವಂತರಿದ್ದಾರೆ. ಉಪನ್ಯಾಸಕ ವರ್ಗ ಬದ್ಧತೆಯಿಂದ ಕಾರ್ಯನಿರ್ವಹಿಸಿದೆ. ವೈಯಕ್ತಿಕ ಕಾಳಜಿ ವಹಿಸಿ, ಅಧ್ಯಯನಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡಲಾಗಿದೆ. ನಮ್ಮ ಕಾಲೇಜಿನ ಆಡಳಿತ ಮಂಡಳಿ, ಪಾಲಕ-ಪೋಷಕ ವರ್ಗದವರ ಸಹಕಾರ ದೊರೆತಿದ್ದು, ಉತ್ತಮ ಫಲಿತಾಂತಕ್ಕೆ ಸಹಾಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬಿ.ಗುತ್ತೇದಾರ, ಕಾಲೇಜಿನ ಉಪನ್ಯಾಸಕರಾದ ರಾಯಣ್ಣ ಕಟ್ಟಿಮನಿ, ಮಲ್ಲಿಕಾರ್ಜುನ ಭಾಸಗಿ, ನಬಿಪಟೇಲ್, ಶಿವಾನಂದ ಸಿಂಪಿ, ಕಲ್ಪನಾರೆಡ್ಡಿ, ಮೌನೇಶ ಸೋಮನಾಥಹಳ್ಳಿ, ವೀರೇಶ್ ಗೋಗಿ, ಸರಸ್ವತಿ ಸೇರಿದಂತೆ ಮತ್ತಿತರರಿದ್ದರು.
ಉತ್ತಮ ಅಂಕಗಳನ್ನು ಪಡೆದು ಡಿಕ್ಟಿಂಕ್ಷನದೊಂದಿಗೆ ಉತ್ತೀರ್ಣರಾದ ಪ್ರೇಮಾ ಎಂ.ಯಕ್ಕಂಚಿ, ಲಕ್ಷ್ಮಣ ಹೇರೂರ್, ಚಂದಯ್ಯ ಎಸ್.ಕರಕಿಹಳ್ಳಿ, ಸಂಗಮೇಶ ಕರಕಿಹಳ್ಳಿ, ಸೃಜನ್ ತೊನಸಳ್ಳಿ, ಯಾಸೀನ್ ಮದರಿ, ಶರಣಮ್ಮ ಆಲೂರ್, ಮಭನೇಶ್ ಜಿ.ಜನಿವಾರ, ರಾಜು ಎಸ್.ಗಂವಾರ್ ಅವರಿಗೆ ಸತ್ಕರಿಸಿ, ಅಭಿನಂದಿಸಲಾಯಿತು.