ಕ.ಕ ಪ್ರದೇಶದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ

ಕಲಬುರಗಿ,ನ.15: ಕಲ್ಯಾಣ ಕರ್ನಾಟಕ ಪ್ರದೇಶದ ಜನರು ನಮ್ಮಿಂದ ಉನ್ನತ ಸಾಧನೆ ಅಸಾಧ್ಯವೆಂಬ ಮನೋಭಾವನೆಯಿಂದ ಹೊರಬಂದು ನಿರಂತರವಾಗಿ ಶ್ರಮಿಸಿದರೆ, ಬೇರೆ ಪ್ರದೇಶದ ಜನರಿಗಿಂತ ಕಡಿಯಿಲ್ಲದೆ ಸಾಧನೆ ಮಾಡಬಹುದಾಗಿದೆ. ಈ ಭಾಗದಲ್ಲಿ ವಿವಿಧ ಕ್ಷೇತ್ರದ ಸಾಕಷ್ಟು ಪ್ರತಿಭಾವಂತರಿದ್ದು, ಅವರನ್ನು ಗುರ್ತಿಸಿ, ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯ ಸರ್ಕಾರಿ ನೌಕರರಿಗಾಗಿ ಇತ್ತೀಚಿಗೆ ದಾವಣೆಗೆರೆಯಲ್ಲಿ ಏರ್ಪಡಿಸಿದ್ದ ರಾಜುಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಫರ್ಧೆಗಳಲ್ಲಿ ಈಜು ಸ್ಪರ್ಧೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ನಗರದ ಸಮೀಪವಿರುವ ಝಾಪೂರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿಗೆ ಗ್ರಾಮದ ವತಿಯಿಂದ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಗ್ರಾ.ಪಂ ಸದಸ್ಯ ಪೀರಪ್ಪ ದೊಡ್ಡಮನಿ ಮಾತನಾಡಿ, ಗಣಮುಖಿ ಅವರು ಬಹುಮುಖ ಪ್ರತಿಭೆವುಳ್ಳವರಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸಮಾಜ ಸೇವಕರಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾರೆ. ಶಿಕ್ಷಕರ ಸಂಘಟನೆಯ ಪ್ರತಿನಿಧಿಯಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಶಾಲೆಯ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸುತ್ತಾರೆ. ನಮ್ಮ ಗ್ರಾಮದ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇವರು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ, ನಮ್ಮ ಊರು, ಶಾಲೆಗೆ ಕೀರ್ತಿಯನ್ನು ತರುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ವೇದಮೂರ್ತಿ ಬಸಯ್ಯಸ್ವಾಮಿ ಹೊದಲೂರ, ಸಹ ಶಿಕ್ಷಕ ಪರಮೇಶ್ವರ ದೇಸಾಯಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಡಿ.ಮಾಂಗ್, ಗ್ರಾ.ಪಂ ಸದಸ್ಯರಾದ ಪರಮೇಶ್ವರ ಪೂಜಾರಿ, ಸಹ ಶಿಕ್ಷಕರಾದ ಬಸಮ್ಮ ವಿ.ಪಾಟೀಲ, ಶಾಂತಾಬಾಯಿ ವಿ.ಹಿರೇಮಠ, ಲಕ್ಕುನಾಯಕ್, ಪ್ರಮುಖರಾದ ಅರುಣಕುಮಾರ ಕಟ್ಟಿಮನಿ, ಮಲ್ಲಮ್ಮ ಪೂಜಾರಿ, ಪ್ರೇಮಕುಮಾರ ಹೊಸಮನಿ, ಮರೆಪ್ಪ ಸಂಪಂಗಿ, ಕೃಷ್ಣಾ ಕಟ್ಟಮನಿ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.