ಕ.ಕ.ಪ್ರದೇಶಕ್ಕೆ ಪ್ರತ್ಯೇಕ ೩ ಸಾವಿರ ಕೋಟಿ ರೂ.ಅನುದಾನ ಬಿಡುಗಡೆಗೆ ರಝಾಕ್ ಆಗ್ರಹ

ರಾಯಚೂರು,ಜು.೩೦- ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕವಾಗಿ ೩ ಸಾವಿರ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡ ರಝಾಕ್ ಉಸ್ತಾದ್ ಸರ್ಕಾರಕ್ಕೆ ಒತ್ತಾಯಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಒಂದಿಲ್ಲೊಂದು ರೀತಿಯಲ್ಲಿ ವಂಚಿಸುತ್ತ ಬರುತ್ತಿದೆ.ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕಾತಿ ಮಾಡುವುದು, ಮಂಡಳಿ ಸದಸ್ಯರ ನೇಮಕಾತಿಯಲ್ಲಿ ವಿಳಂಭ,ಕಲ್ಯಾಣ ಕರ್ನಾಟಕ ಕೃಷಿ , ಸಾಂಸ್ಕೃತಿ , ಮಾನವ ಸಂಪನ್ಮೂಲ ಸಂಘ ಸ್ಥಾಪಿಸಿ ಕೆಕೆಆರ್‌ಡಿಬಿ ಅನುದಾನ ನೀಡುವ ವಿಷಯದಲ್ಲಿ ನೇಮಕಾತಿ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಪೂರ್ವಾನುಮತಿಯ ವಿಷಯದಲ್ಲಿ ಆಗಲೀ,ನೇಮಕಾತಿ ಆಯ್ಕೆಯ ನಿಯಮಗಳಲ್ಲಾಗಲೀ,ಖಾಲಿ ಹುದ್ದೆಗಳ ಭರ್ತಿ ಮಾಡುವ ಸಂದರ್ಭದಲ್ಲಿ,ಶಿಕ್ಷಣ ಮೀಸಲಾತಿ ಅನುಷ್ಠಾನ ಸೇರಿದಂತೆ ಅಲವಾರು ವಿಷಯಗಳಲ್ಲಿ ವಂಚಿಸುತ್ತಾ ಬಂದಿದೆ ಎಂದು ಆರೋಪಿಸಿದರು.
ವರ್ಷದ ಬಜೆಟ್ ಮಂಡನೆ ವೇಳೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ೩ ಸಾವಿರ ಕೋಟಿ.ರೂ ಅನುದಾನ ನೀಡುವದಾಗಿ ಘೋಷಿಸಲಾಗಿದೆ .ಇದರಲ್ಲಿ ೧೫೦೦ ಕೋಟಿ.ರೂ ಅನುದಾನವನ್ನು ಮೈಕ್ರೋ ಯೋಜನೆಗೆ ಹಾಗೂ ಇನ್ನುಳಿದ ೧೫೦೦ ಕೋಟಿ.ರೂ ಅನುದಾನವನ್ನು ಈ ಭಾಗದ ಶಿಕ್ಷಣ , ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೇ ಬಜೆಟ್‌ನಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿ ಯೋಜನೆಗೆ ೩ ಕೋಟಿ ರೂ ಅನುದಾನ ಮೀಸಲಿಡಲಾಗಿದೆ.ಆದರೆ ಸರಕಾರ ರಾಜ್ಯದ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ವಲಯವಾರು ಹಂಚಿಕೆ ಮಾಡುವಾಗ ವಿಶೇಷ ಅಭಿವೃದ್ಧಿ ಯೋಜನೆಯ ೧೦೦೦ ಕೋ.ರೂ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಿ, ಬಜೆಟ್‌ನಲ್ಲಿ ಹೇಳಿರುವಂತೆ ಮಂಡಳಿಗೆ ೩ ಸಾವಿರ ಕೋಟಿ ರೂ.ಬದಲಾಗಿ ಕೇವಲ ೨ ಸಾವಿರ ಕೋಟಿ ರೂ ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ ಆರೋಪಿಸಿದರು.
ಡಾ.ಡಿ.ಎಂ.ನಂಜುಂಡಪ್ಪನವರ ವರದಿ ಅನುಷ್ಠಾನದ ವಿಶೇಷ ಅಭಿವೃದ್ಧಿ ಯೋಜನೆಗೆ ರಾಜ್ಯದ ೧೧೪ ಹಿಂದುಳಿದ ತಾಲ್ಲೂಕುಗಳಿಗೆ ಅವರ ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತದೆ. ಅದರಂತೆ ಕಲ್ಯಾಣ ಕರ್ನಾಟಕದ ಅಂದಿನ ೩೧ ತಾಲ್ಲೂಕುಗಳಲ್ಲಿ ೨೮ ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳಾಗಿರುವ ಕಾರಣ ಒಟ್ಟು ಅನುದಾನದ ಶೇ ೪೦ ರಷ್ಟು ಅನುದಾನ ಈ ಭಾಗಕ್ಕೆ ಹಂಚಿಕೆ ಮಾಡಬೇಕು ಎಂದು ವರದಿಯಲ್ಲಿಯೇ ಉಲ್ಲೇಖಿವಿದೆ. ಅದರಂತೆ ಕಳೆದ ೧೫ ವರ್ಷಗಳಿಂದ ಹಂಚಿಕೆ ಮಾಡಲಾಗುತ್ತಿತ್ತು.ಅದರಂತೆ ವಿಶೇಷ ಅಭಿವೃದ್ಧಿ ಯೋಜನೆಯ ೩ ಸಾವಿರ ಕೋಟಿ ರೂ ಅನುದಾನದಲ್ಲಿ ೧೨ ನೂರು ಕೋಟಿ.ರೂ ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಬಳಕೆ ಮಾಡಬೇಕಿದೆ.ಆದರೆ ಸರಕಾರ ಆ ಅನುದಾನವನ್ನು ಮಂಡಳಿಗೆ ವರ್ಗಾವಣೆ ಮಾಡಿರುವದರಿಂದ ಸರಕಾರ ಮಂಡಳಗೂ ವಂಚಿಸಿದೆ ಎಂದರು.
ವಿಶೇಷ ಅಭಿವೃದ್ಧಿಯ ಯೋಜನೆಯ ಮೂಲ ಉದ್ದೇಶಕ್ಕೂ ಬಿಜೆಪಿ ಸರಕಾರ ಅನ್ಯಾಯವೆಸಗಿದೆ.ಸರಕಾರ ಈ ರೀತಿಯ ವಂಚಿಸುವ ಕೆಲಸವನ್ನು ಕೈಬಿಟ್ಟು , ಬಜೆಟ್‌ನಲ್ಲಿ ಘೋಷಿಸಿರುವಂತೆ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಂತೆ ವಿವಿಧ ಇಲಾಖೆಗಳಿಗೆ ಅನುದಾವನ್ನು ಹಂಚಿಕೆ ಮಾಡಬೇಕು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ೩ ಸಾವಿರ ಕೋಟಿ ರೂ ಅನುದಾನವನ್ನು ವಿಶೇಷವಾಗಿ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಯಾದವ್,ವಿನೋದ ರೆಡ್ಡಿ,ವೀರೇಶ್ ಹೀರಾ, ರಾಜೇಶಕಮಾರ ಇದ್ದರು.