ಕ.ಕ. ಅಭಿವೃದ್ಧಿ ಮಂಡಳಿಯಿಂದ 20 ಕೋಟಿ ಅನುದಾನ ತರಲು ನಿರ್ಧಾರ

ಬೀದರ:ನ.4: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮೂಲಸೌಕರ್ಯಗಳಾದ ಪಾಠೋಪಕರಣ ಹಾಗೂ ಪೀಠೋಪಕರಣಗಳ ಒದಗಿಸಲು ಸಭೆ ಮಂಜೂರಿ ನೀಡಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ.ಎಂ.ಭಾಸ್ಕರ್ ನುಡಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಜರುಗಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು “ಈ ಶೈಕ್ಷಣಿಕ ಸಾಲಿನಲ್ಲಿ ಎಂ.ಎ. ಕನ್ನಡ ಜಾನಪದ, ಎಂ.ಎ. ಮಹಿಳಾ ಅಧ್ಯಯನ, ಡಿಪ್ಲೋಮಾ ಯೋಗ ಶಿಕ್ಷಣ ಹಾಗೂ ಪಾರಂಪರಿಕ ಕೃಷಿ ಹಾಗೂ ವಾಸ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭ ಮಾಡಲಾಗುವುದು ಎಂದು ಕುಲಪತಿಗಳು ತಿಳಿಸಿದರು. ಕರ್ನಾಟಕ ಜಾನಪದ ವಿ.ವಿ. ಪ್ರಾದೇಶಿಕ ಅಧ್ಯಯನ ಕೇಂದ್ರಗಳಿಗೆ ಇನ್ಮುಂದೆ ಸ್ನಾತಕೋತ್ತರ ಕೇಂದ್ರಗಳಾಗಿ ಮಾರ್ಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೀದರನ ಕಮಠಾಣಾದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಮಂಜೂರು ಮಾಡಲಾದ 5 ಎಕರೆ ಜಮೀನಿನಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಕಟ್ಟಡಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು ರೂ. 5 ಕೋಟಿ ಅನುದಾನ ತರಲು ಪ್ರಯತ್ನಿಸಲಾಗುವುದು. ಅದೇ ಸ್ಥಳದಲ್ಲಿ ಗೋಶಾಲೆ ಆರಂಭಿಸಿ ಸುಮಾರು 100 ಆಕಳುಗಳನ್ನು ಸಂರಕ್ಷಿಸಿ ಹೈನುಗಾರಿಕೆ ಮಾಡುತ್ತ ಬಂದ ಹಣದಲ್ಲಿ ವಿ.ವಿ. ಖರ್ಚು ವೆಚ್ಚಗಳನ್ನ ನಿಭಾಯಿಸಲಾಗುವುದು. ವಿವಿಧ ಔಷಧಿ ಗುಣ ಹೊಂದಿರುವ ಸಸಿಗಳನ್ನು ವಿ.ವಿ.ಆವರಣದಲ್ಲಿ ನೆಟ್ಟು ವಾತಾವರಣವನ್ನು ಆರೋಗ್ಯಯುತವಾಗಿ ಇಡಲಾಗುವುದು ಎಂದು ಪ್ರೊ. ಟಿ.ಎಂ.ಭಾಸ್ಕರ್ ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಜಗನ್ನಾಥ ಹೆಬ್ಬಾಳೆ ಈ ಸಭೆಯನ್ನು ಆಯೋಜನೆ ಮಾಡಿದ್ದರು. ಇದೇ ವೇಳೆ ಎಲ್ಲಾ ಸಿಂಡಿಕೇಟ್ ಸದಸ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ, ಸಿಂಡಿಕೇಟ್ ಸದಸ್ಯರಾದ ಕೆ.ಎನ್.ಪಾಟೀಲ, ಹಾಸನ ರಘು, ವಸಂತಕುಮಾರ, ಶ್ರೀಮತಿ ಸುನಂದಾ, ಹಿದಾಯತ್, ಹಾಗೂ ಸಂಘದ ಟ್ರಸ್ಟ್ ಅಧ್ಯಕ್ಷ ಶಂಕರೆಪ್ಪ ಹೊನ್ನಾ, ಪ್ರೊ. ಎಸ್.ಬಿ.ಬಿರಾದಾರ, ನಿಜಲಿಂಗಪ್ಪ ತಗಾರೆ, ಡಾ. ರಾಜಕುಮಾರ ಹೆಬ್ಬಾಳೆ, ಎಸ್.ಬಿ.ಕುಚಬಾಳ, ಶಿವಶರಣಪ್ಪ ಗಣೇಶಪುರ, ಡಾ. ಮಹಾನಂದ ಮಡಕಿ, ಡಾ. ಸುನಿತಾ ಕೂಡ್ಲಿಕರ್, ಸುನಿತಾ ಬುಡೇರಿ, ಶ್ರೀಧರ್ ಜಾಧವ ಸೇರಿದಂತೆ ಅನೇಕರಿದ್ದರು. ಸಭೆಯ ಬಳಿಕ ಬೀದರ ತಾಲೂಕಿನ ಕಮಠಾಣಾದಲ್ಲಿ ಸರ್ಕಾರ ಮಂಜೂರಿ ಮಾಡಲಾದ 5 ಎಕರೆ ಜಮೀನಿಗೆ ಕುಲಪತಿಗಳು ಹಾಗೂ ಎಲ್ಲಾ ಸಿಂಡಿಕೇಟ್ ಸದಸ್ಯರು ಭೇಟಿ ನೀಡಿದ್ದರು. ಡಾ. ಜಗನ್ನಾಥ ಹೆಬ್ಬಾಳೆ ಸ್ವಾಗತಿಸಿ ವಂದಿಸಿದರು.