ಕ್ಷೌರಿಕರಿಗೆ ೧೦ ಸಾವಿರ ರೂ ನೆರವು ನೀಡಲು ಶರಣಬಸವ ಈಚನಾಳ ಆಗ್ರಹ

ಲಿಂಗಸುಗೂರು,ಮೇ.೨೦-ಲಾಕ್ ಡೌನ್ ನಿಂದ ಸಂಕಷ್ಟ ಅನುಭವಿಸುತ್ತಿರುವ ಹಡಪದ (ಕ್ಷೌರಿಕ) ಸಮಾಜ ಕ್ಕೆ ೧೦ ಸಾವಿರ ರೂಪಾಯಿಗಳ ನೆರವು ನೀಡುವಂತೆ ಹಡಪದ ಸಮಾಜದ ಯುವ ಘಟಕದ ಅಧ್ಯಕ್ಷ ಶರಣಬಸವ ಈಚನಾಳ ಆಗ್ರಹಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲುಕಿನಾದ್ಯಂತ ಸುಮಾರು ೨೩೦ ಹಡಪದ ಅಂಗಡಿಗಳು ಬಂದ್ ಆಗಿವೆ. ಈ ಮಧ್ಯೆ ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಹಡಪದ ಸಮಾಜದವರು ನಗರ ಪ್ರದೇಶಗಳಲ್ಲಿ ಅಂಗಡಿ, ಮನೆ ಬಾಡಿಗೆ, ಕಟ್ಟಲು ಕೂಡ ತುಂಬಾ ಕಷ್ಟವಾಗುತ್ತಿದೆ. ಗ್ರಾಮಿಣ ಭಾಗದಲ್ಲಿ ಕೂಡ ಅಂಗಡಿ ಹಾಕಲು ಜಾಗವಿಲ್ಲದೇ, ರಸ್ತೆ ಬದಿಯಲ್ಲಿ ಕುಳಿತು ಕ್ಷೌರ ಮಾಡುವ ಸ್ಥಿತಿ ಇದೆ. ಹೀಗಾಗಿ ಕುಲವೃತ್ತಿ ಯನ್ನೇ ನಂಬಿದ ಕುಟುಂಬಗಳು ಬೀದಿಗೇ ಬಂದಿವೆ. ಹಡಪದ ಸಮುದಾಯಗಳ ಜೀವನ ನಿರ್ವಹಣೆಗೆ ಇಪ್ಪತ್ತು ಸಾವಿರ ರೂಪಾಯಿಗಳ ಪರಿಹಾರ, ರಾಷ್ಟ್ರೀಕೃತ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ, ಸಹಕಾರ ಸಂಘಗಳ ಸಾಲಮನ್ನಾ ಮಾಡಬೇಕು. ಕೊವಿಡ್ ಸೊಂಕಿನಿಂದ ಮೃತಪಟ್ಟ ಕ್ಷೌರಿಕ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು.
ಯುವ ಘಟಕದ ಗೌರವಾಧ್ಯಕ್ಷ ಕುಮಾರಸ್ವಾಮಿ ಕಸಬಾಲಿಂಗಸುಗೂರು, ಪ್ರಧಾನ ಕಾರ್ಯದರ್ಶಿ ಚುಡಾಮಣಿ ಚಿತ್ತಾಪುರ, ಜಗನ್ನಾಥ, ಸಂಗಮೇಶ ಈ ವೇಳೆ ಉಪಸ್ಥಿರಿದ್ದರು.