ಕ್ಷೇತ್ರ ಸಂಕಟ:ಮತ್ತೆ ವರಿಷ್ಠರ ಭೇಟಿಗೆ ನಿರ್ಧಾರ

ಬೆಂಗಳೂರು,ಮಾ.೧೯: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಬೇಕೇ ಇಲ್ಲವೇ ಮೈಸೂರಿನ ವರುಣದಿಂದ ಸ್ಪರ್ಧಿಸಬೇಕೇ ಅಥವಾ ಎರಡೂ ಕ್ಷೇತ್ರದಿಂದ ಸ್ಪರ್ಧೆಗಿಳಿಯಬೇಕೇ ಎಂಬ ಬಗ್ಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರಿಷ್ಠರ ಸಲಹೆ ಪಡೆಯಲು ನಿರ್ಧರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನವಾರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ.
ನಾಳೆ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯ ಕಾಂಗ್ರೆಸ್ ಬೆಳಗಾವಿಯಲ್ಲಿ ಆಯೋಜಿಸಿರುವ ಯುವ ಸಮಾವೇಶದಲ್ಲಿ ಭಾಗಿಯಾಗುವರು. ಈ ಸಮಾವೇಶದಲ್ಲಿ ಸಿದ್ದರಾಮಯ್ಯರವರು ಪಾಲ್ಗೊಳ್ಳಲಿದ್ದು, ಈ ಸಮಾವೇಶ ಮುಗಿಸಿಕೊಂಡು ಸಿದ್ದರಾಮಯ್ಯ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವರು.
ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಎಲ್ಲವನ್ನೂ ಚರ್ಚಿಸಿದ ನಂತರ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಅಂತಿಮಗೊಳ್ಳಲಿದೆ.
ಈ ಮೊದಲು ಸಿದ್ದರಾಮಯ್ಯರವರು ಕೋಲಾರದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದರು. ಆದರೆ, ರಾಹುಲ್‌ಗಾಂಧಿ ಅವರು ಕೋಲಾರಕ್ಷೇತ್ರ ಅಷ್ಟು ಸುರಕ್ಷಿತವಲ್ಲ. ಕೋಲಾರದ ಬದಲು ವರುಣಾದಿಂದ ಸ್ಪರ್ಧಿಸಿ ಎಂದು ಸಲಹೆ ಮಾಡಿದರು. ಇದರಿಂದ ಸಿದ್ದರಾಮಯ್ಯ ಅವರು ಕ್ಷೇತ್ರ ಆಯ್ಕೆ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದರು. ಈ ಎಲ್ಲ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಗೊಂದಲಗಳಿಗೆ ತೆರೆ ಎಳೆದು ಅಂತಿಮ ತೀರ್ಮಾನ ಕೈಗೊಳ್ಳಲು ವರಿಷ್ಠರನ್ನು ಸಿದ್ದರಾಮಯ್ಯ ಮತ್ತೆ ಭೇಟಿ ಮಾಡಲಿದ್ದಾರೆ.
ಅವರ ಮುಂದಿನ ದೆಹಲಿ ಭೇಟಿಯಲ್ಲಿ ಕ್ಷೇತ್ರ ಗೊಂದಲ ಇತ್ಯರ್ಥವಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.