
ಎನ್.ವೀರಭದ್ರಗೌಡ
ಬಳ್ಳಾರಿ:ಮೇ,4- ವಿಜಯನಗರ ಜಿಲ್ಲೆಯಲ್ಲಿನ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿರುವುದು 2008 ರಲ್ಲಿ. ಪರಿಶಿಷ್ಟ ಜಾತಿಗೆ ಮೀಸಲಿರುವ ಕ್ಷೇತ್ರ, ಕೊಟ್ಟೂರು ಪಟ್ಟಣ ಹಗರಿಬೊಮ್ಮನಹಳ್ಳಿ ತಾಲೂಕು ಮತ್ತು ಹೊಸೊಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ವ್ಯಪ್ತಿಯನ್ನು ಹೊಂದಿದೆ
ಪಶ್ಚಿಮದಲ್ಲಿ ಹರಿಯುವ ತುಂಗಭದ್ರ ನದಿ ಮತ್ತು ತುಂಗಭದ್ರ ಜಲಾಶಯದ ಹಿನ್ನೀರನ್ನು ಏತನೀರಾವರಿ ಮೂಲಕ ಪಡೆದು ಕೆಲ ಪ್ರದೇಶ ನೀರಾವರಿ ಆಗಿದೆ. ಬಿಟ್ಟರೆ ಉಳಿದಂತೆ ಮಳೆಯಾಧಾರಿತ ಪ್ರದೇಶ.
ತಾಲೂಕಿನಲ್ಲಿ ಕೋಳಿ ಸಾಕಾಣಿಕೆ ಉತ್ತಮವಾಗಿದೆ. ಹನಿ ನೀರಾವರಿಯಿಂದ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ಪಡುವಲಕಾಯಿ, ದಾಳಿಂಬಿ, ಹೂ ಕೋಸು, ಬೆಳೆಯಲಾಗುತ್ತದೆ. ಮಾಲ್ವಿ ಜಲಾಶಯಕ್ಕೆ ಮಳೆ ಅಭಾವದಿಂದ ಕಳೆದ ಹಲವಾರು ವರ್ಷಗಳಿಂದ ಭರ್ತಿಯಾಗಿಲ್ಲ ಎಂಬ ಕಾರಣಕ್ಕೆ ತುಂಗಭದ್ರ ನದಿಯಿಂದ ನೀರುನ್ನು ಪಂಪ್ ಮಾಡಿ ತುಂಬಿಸಲಾಗುತ್ತಿದೆ.
ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಟ್ಟಣ , ಕೊಟ್ಟೂರು ಪಟ್ಟಣ ಪಂಚಾಯ್ತಿ ಹೊಂದಿವೆ.
ಕ್ಷೇತ್ರದಲ್ಲಿನ ಕೊಟ್ಟೂರಿನ ಗುರುಬಸವೇಶ್ವರ ದೇವಸ್ಥಾನ, ತಂಬ್ರಳ್ಳಿಯ ಬಂಡೆ ರಂಗನಾಥ ದೇವಸ್ಥಾನ ಪ್ರಮುಖವಾದವುಗಳು. ಅಲ್ಲದೆ ಅಂಕ ಸಮುದ್ರದ ಪಕ್ಷಿ ಧಾಮ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.
ಕಣದಲ್ಲಿ: ಈ ಕ್ಷೇತ್ರದಲ್ಲಿ ಒಟ್ಟು 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರುಗಳೆಂದರೆ ಕಾಂಗ್ರೆಸ್ ನಿಂದ ಹಾಲಿ ಶಾಸಕ ಎಲ್.ಬಿ.ಪಿ ಭೀಮಾನಾಯ್ಕ ಹ್ಯಾಟ್ರಿಕ್ ಗೆಲುವಿಗಾಗಿ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್ ನಿಂದ ಮಾಜಿ ಶಾಸಕ ನೇಮಿರಾಜ ನಾಯ್ಕ ಕೆ. ಮತ್ತು ಬ್ಯಾಲಹುಣ್ಸಿ ರಾಮಣ್ಣ ಬಿಜೆಪಿಯಿಂದ ಸ್ಪರ್ಧೆಯಲ್ಲಿದ್ದರೆ.
ಉಳಿದಂತೆ ಬಿಎಸ್ಪಿಯಿಂದ ಹೆಚ್.ತಿಪ್ಪೇಸ್ವಾಮಿ, ಆಮ್ ಆದ್ಮಿಯಿಂದ ಡಾ.ವಿ.ಹೆಚ್.ಹನುಮಂತಪ್ಪ, ಡಿ. ಲಾಲ್ಯಾ ನಾಯ್ಕ(ಇಂಡಿಯನ್ ಮೂವ್‌ಮೆಂಟ್ ಪಕ್ಷ, ಹನಸಿ ಶಿವಮೂರ್ತಿ(ಕೆಆರ್‌ಪಿಪಿ),
ಸುಗುಣಾ ಕೆ.(ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ) ಹೆಚ್.ವಿ.ಸಂತೋಷ್ ಕುಮಾರ್(ಕೆಆರ್‌ಎಸ್) ಅಲ್ಲದೆ ಜೆ.ಅಂಜಿನಪ್ಪ,ಹೆಚ್.ಮಂಜುನಾಥ ನಾಯ್ಕ, ಡಾ.ಎ.ಎಂ.ಎ.ಸುರೇಶ್ ಕುಮಾರ್ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಮತದಾರರು:
ಈ ಕ್ಷೇತ್ರದಲ್ಲಿ 114630 ಪುರುಷ, 115335 ಮಹಿಳಾ ಮತ್ತು 22 ಇತರೇ ಮತದಾರರು ಸೇರಿ ಒಟ್ಟು 229987. ಮತದಾರರು ಇದ್ದಾರೆ.
ಇವರಲ್ಲಿ 4197 ವಿಕಲಚೇತನ, 80 ವರ್ಷ ಮೇಲ್ಪಟ್ಟವರು 2857 ಹಾಗು 12645 ಯುವ ಮತದಾರರಿದ್ದಾರೆ. ಮತದಾನಕ್ಕೆ 252 ಮತಗಟ್ಟಿಗಳನ್ನು ಸ್ಥಾಪಿಸಿದೆ.