ಕ್ಷೇತ್ರ ದರ್ಶನಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ


ಎನ್.ವೀರಭದ್ರಗೌಡ
ಬಳ್ಳಾರಿ, ಏ.28 ಇದು ಏಕ ಶಿಲಾ ಬೆಟ್ಟ, ಅದರ ಮೇಲೆ ಐತಿಹಾಸಿಕ ಕೋಟೆ, ಜೀನ್ಸ್ ಸಿದ್ದ ಉಡುಪುಗಳ ಉತ್ಪಾದನೆ, 25 ಕ್ಕೂ ಹೆಚ್ಚು  ಕಾಟನ್ ಮಿಲ್ ಸೇರಿದಂತೆ ವಿವಧ ಉದ್ಯಮಗಳನ್ನು ಹೊಂದಿರುವ   ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದೆ.
 ಐತಿಹಾಸಿಕವಾಗಿ:
ಹಂಡೆ ಹನುಮಪ್ಪ ನಾಯಕ ಹೈದರಾಲಿ, ಟಿಪ್ಪು ನಂತರ ಬ್ರಿಟಿಷರಿಂದ ಮದ್ರಾಸ್ ಆಡಳಿತಕ್ಕೆ ಒಳಪಟ್ಟಿತ್ತು. ಇದರಿಂದ ಇಲ್ಲಿ  ಎರೆಡು ಶತಮಾನಗಳಿಗಿಂತ ಹಳೆಯದಾದ ಕ್ರೈಸ್ತ ಮಿಷನರಿಗಳ ಚರ್ಚಗಳಿವೆ.
ಕನ್ನಡದ ಮೊದಲ ದಿನ‌ಪತ್ರಿಕೆ ಮಂಗಳೂರು ಸಮಾಚಾರ ಮೊದಲ‌ ಮುದ್ರಣ ಕಂಡಿದ್ದು ಇಲ್ಲಿಯೇ.
ಐತಿಹಾಸಿಕ ಕೋಟೆ ಮಲ್ಲೇಶ್ವರ, ಕನಕ ದುರ್ಗಮ್ಮ ದೇವಸ್ಥಾನ‌ ಪ್ರಸಿದ್ದವಾದವು.
 ಮಂಡಾಳು ಒಗ್ಗರಣೆ:
ಇಲ್ಲಿ ಸಿದ್ದಪಡಿಸುವ ಮಂಡಾಳು ಒಗ್ಗರಣಿ ಮತ್ತು ಹಿಟ್ಟಚ್ಚಿದ ಮೆಣಸಿನಕಾಯಿ ವಿಶೇಷವಾದ ತಿಂಡಿ. ಬಳ್ಳಾರಿಗೆ ಬಂದವರು ಇದನ್ನು ಸವಿಯದವರೇ ಇಲ್ಲ.
ಸಿದ್ದ ಉಡುಪುಗಳ ಪಾರ್ಕ್ ನಿರ್ಮಿಸಲು ಚಾಲನೆ ನೀಡಲಾಗಿದೆ ಹೊರತು ಅದು ಇನ್ನೂ  ಕಾರ್ಯಗತಗೊಂಡಿಲ್ಲ.
ಮಹಾನಗರ ಪಾಲಿಕೆಯನ್ನು ಹೊಂದಿರುವ ಈ ವಿಧಾನ ಸಭಾ  ಕ್ಷೇತ್ರಲ್ಲಿ ಈ ಮೊದಲು ಇದ್ದ ಕೌಲ್ ಬಜಾರ್ ಪ್ರದೇಶದ 10 ವಾರ್ಡುಗಳನ್ನು ಬಳ್ಳಾರಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ ಕ್ಷೇತ್ರ ಮರು ವಿಂಗಡಣೆಯಲ್ಲಿ ಸೇರಿಸಿದೆ.
 ಕೋಟ್ಯಾಧಿಪತಿಗಳೇ:
ಸ್ಪರ್ಧಾ ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೆಲ್ಲ  ಕೋಟ್ಯಾಧಿಪತಿಗಳಾಗಿರುವುದರಿಂದ ಮತಗಳಿಗೆ ಹಣದ ಅಮಿಷ ಒಡ್ಡುವ ಸಾಧ್ಯತೆ ಹಿನ್ನಲೆಯಲ್ಲಿ ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಿದೆ. ಜಿಲ್ಲೆಯಲ್ಲಿಯೇ ಈ ಕ್ಷೇತ್ರದಲ್ಲಿ ಅತ್ಯಾಧಿಕ 24 ಜನ ಸ್ಪಧಾ ಕಣದಲ್ಲಿದ್ದಾರೆ.
 ಮತದಾರರು
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 2 ಲಕ್ಷದ 59ಸಾವಿರದ 184 ಮತದಾರರಿದ್ದು  ಈ ಪೈಕಿ  1,26,067 ಪುರುಷ ಮತದಾರರು, 1,33,087 ಮಹಿಳೆ ಮತದಾರರು ಮತ್ತು 30 ಲಿಂಗತ್ವ ಅಲ್ಪ ಸಂಖ್ಯಾತ ಮತದಾರರಿದ್ದಾರೆ ಇವರಲ್ಲಿ 8,332 ಯುವ ಮತದಾರರು, 4,691 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 1,370 ವಿಶೇಷ ಚೇತನ ಮತದಾರರಿದ್ದಾರೆ.  ಮತದಾನಕ್ಕೆ  262 ಮತಗಟ್ಟೆ ಸ್ಥಾಪಿಸಲಾಗುತ್ತಿದೆ.
ಕ್ಷೇತ್ರದಲ್ಲಿ ಮೊದಲಿನಿಂದ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದರು. ಇಲ್ಲಿಂದ  ಆಯ್ಕೆಯಾಗಿದ್ದ ಎಂ.ರಾಮಪ್ಪ, ಎಂ.ದಿವಾಕರಬಾಬು, ಶ್ರೀರಾಮುಲು ಸಚಿವರಾಗಿದ್ದರು.
2004 ರಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾದರು. ಹಾಲಿ  ಶಾಸಕರಾಗಿರುವ ಜಿ.ಸೋಮಶೇಖರ ರೆಡ್ಡಿ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ ನಿಂದ ನಾರಾ ಭರತ್ ರೆಡ್ಡಿ, ಜೆಡಿಎಸ್ ನಿಂದ ಮಾಜಿ ಶಾಸಕ ಅನಿಲ್ ಲಾಡ್, ಕೆಆರ್ಪಿ ಪಕ್ಷದಿಂದ ಲಕ್ಷ್ಮೀ ಅರುಣ ಇವರ ನಡುವೆ ಸ್ಪರ್ಧೆ ಇದೆ. ಉಳಿದಂತೆ ಆಮ್ ಆದ್ಮಿ ಸೇರಿದಂತೆ  ಇತರೇ ಪಕ್ಷಗಳ ಮತ್ತು ಪಕ್ಷೇತರರು ಸ್ಪರ್ಧಾ ಕಣದಲ್ಲಿದ್ದಾರೆ.