ಕ್ಷೇತ್ರ ಆಯ್ಕೆ ಸಿದ್ದುಗೆ ತಲೆನೋವು

ವರಿಷ್ಠರು ಹೇಳಿದ ಕಡೆ ಸ್ಪರ್ಧೆ

ಬೆಂಗಳೂರು,ಮಾ.೧೮:ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷ ೧೨೫ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಯುಗಾದಿ ಹಬ್ಬದ ವೇಳೆಗೆ ಪಟ್ಟಿ ಬಿಡುಗಡೆಗೆ ತಯಾರಿ ನಡೆಸಿದೆ. ಆದರೆ,ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ವರಿಷ್ಠರು ಬರಲು ಆಗಿಲ್ಲ. ಸಿದ್ದರಾಮಯ್ಯರವರ ಕ್ಷೇತ್ರ ಗೊಂದಲ ಮುಂದುವರೆದಿದೆ.
ದೆಹಲಿಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಹುಲ್‌ಗಾಂಧಿ ಸಹ ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ. ಕೋಲಾರಕ್ಕಿಂತ ವರುಣ ಕ್ಷೇತ್ರ ಉತ್ತಮ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ. ಸಿದ್ದರಾಮಯ್ಯ ಎಲ್ಲಿಂದ ಕಣಕ್ಕಿಳಿಯಬೇಕು ಎಂಬ ಗೊಂದಲದಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾiಯ್ಯ ಕೋಲಾರದಿಂದ ಸ್ಪರ್ಧಿಸುತ್ತಾರೋ ಇಲ್ಲ ಮೈಸೂರಿನ ವರುಣಾದಿಂದ ಸ್ಪರ್ಧೆಗಿಳಿಯುತ್ತಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯರವರು ವರಿಷ್ಠರು ಹೇಳುವ ಕಡೆ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿದ್ದು, ಸಿದ್ದರಾಮಯ್ಯ ಅವರು ಬಹುತೇಕ ವರುಣಾದಿಂದ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಿವೆ.ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ೧೨೫ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ.ಹಾಲಿ ಶಾಸಕರಿಗೆಲ್ಲ ಟಿಕೆಟ್ ನೀಡುವ ನಿರ್ಧಾರವನ್ನು ಸಭೆ ಕೈಗೊಂಡಿತ್ತು.
ಈ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಸಿದ್ದರಾಮಯ್ಯರವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದು, ಆಗ ರಾಹುಲ್‌ಗಾಂಧಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಕೋಲಾರದಿಂದ ಸ್ಪರ್ಧಿಸುವುದು ಬೇಡ. ವರುಣಾದಿಂದಲೇ ಸ್ಪರ್ಧಿಸಿ ಎಂದು ಸಲಹೆ ಮಾಡಿದರು ಎಂದು ಹೇಳಲಾಗಿದೆ.
ರಾಹುಲ್‌ಗಾಂಧಿ ಅವರ ಸಲಹೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರವರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬ ಬಗ್ಗೆ ಯಾವುದೇ ತೀರ್ಮಾನ ಆಗಲಿಲ್ಲ. ಮುಂದಿನ ಸಿಇಸಿ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯರವರು ಸ್ಪರ್ಧಿಸುವ ಕ್ಷೆತ್ರದ ಬಗ್ಗೆ ಅಂತಿಮ ತೀರ್ಮಾನಗಳನ್ನು ಮಾಡಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ನಿನ್ನೆಯ ಸಭೆ ಸಂದರ್ಭದಲ್ಲಿ ಕೋಲಾರ ಕ್ಷೇತ್ರ ಸಿದ್ದರಾಮಯ್ಯರವರಿಗೆ ಅಷ್ಟು ಸುರಕ್ಷಿತವಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರವರು ವರುಣಾದಿಂದಲೇ ಸ್ಪರ್ಧಿಸುವುದು ಸೂಕ್ತ ಎಂಬ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ವರಿಷ್ಠರಿಗೆ ಸಿದ್ದರಾಮಯ್ಯರವರ ಕ್ಷೇತ್ರದ ಆಯ್ಕೆಯನ್ನು ಬಿಡಲಾಗಿದೆ.
ಹೈ ಕಮಾಂಡ್ ತೀರ್ಮಾನ
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯರವರು ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಹೇಳಿದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಂಜನಗೂಡು ಕ್ಷೇತ್ರದಲ್ಲಿ ದಿ. ಧ್ರುವನಾರಾಯಣ ಅವರ ಪುತ್ರ ದರ್ಶನ್ ಸ್ಪರ್ಧೆ ಮಾಡಬೇಕು ಎಂಬುದು ನಮ್ಮೆಲ್ಲರ ಇಚ್ಛೆ. ಅವರಿಗೆ ಟಿಕೆಟ್ ಕೊಡಲಾಗುವುದು. ಮಾಜಿ ಸಚಿವ ಮಹದೇವಪ್ಪರವರು ನಂಜನಗೂಡಿನಿಂದ ಸ್ಪರ್ಧಿಸಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಹಾಗಾಗಿ. ಈ ಕ್ಷೇತ್ರದ ಸ್ಪರ್ಧೆ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದರು.

ಸಿದ್ದು ಪಾಕಿಸ್ತಾನದಿಂದ ಸ್ಪರ್ಧಿಸಲಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಗೊಂದಲದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಪಾಕಿಸ್ತಾನ, ಆಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಿ ಸ್ಪರ್ಧಿಸಿದರೆ ಅವರು ಅಲ್ಲಿ ಗೆಲ್ಲಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಸಿದ್ದರಾಮಯ್ಯ ಗೆಲ್ಲುವುದಿಲ್ಲ. ವರುಣಾ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಈ ಹಿಂದೆ ಸ್ಪರ್ಧಿಸಿ ಸೋತಿದ್ದಾರೆ. ಈಗ ಬಾದಾಮಿ ಕ್ಷೇತ್ರವನ್ನು ಬಿಟ್ಟು ಓಡಿ ಬಂದಿದ್ದಾರೆ. ಕೋಲಾರದಿಂದ ಸ್ಪರ್ಧಿಸಿದರೂ ಅವರ ಗೆಲುವು ಕಷ್ಟವಿದೆ. ಹೀಗಾಗಿ, ಸಿದ್ದರಾಮಯ್ಯ ಮತ್ತೆ ವರುಣಾ ವಿಧಾನಸಭಾ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಬೇರೆ ರಾಜ್ಯ ಇಲ್ಲವೆ ಬೇರೆ ದೇಶ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂದು ಕಟಕಿಯಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಟ್ಟರೆ ೩ನೇ ನಾಯಕರಿಲ್ಲ. ೨೨೪ ಕ್ಷೇತ್ರಗಳಿಗೆ ಪ್ರಜಾಧ್ವನಿ ಯಾತ್ರೆ ತೆರಳಿಲ್ಲ. ಈ ನಾಯಕರು ಟಿಕೆಟ್ ಹಂಚಿಕೆಯಲ್ಲಿ ತಲ್ಲೀನರಾಗಿದ್ದಾರೆ ಎಂದು ಹೇಳಿದರು.