ಕ್ಷೇತ್ರ ಆಯ್ಕೆಯಲ್ಲಿ ಗೊಂದಲವಿಲ್ಲ

ಬೆಂಗಳೂರು,ಮಾ.೨೪:ಮುಂದಿನ ಚುನಾವಣೆಯಲ್ಲಿ ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಕ್ಷೇತ್ರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ನಿವಾಸ ಕಾವೇರಿಯಲ್ಲಿ ಉಪಾಹಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ನಾನು ಶಿಕಾರಿಪುರದಿಂದ ಸ್ಪರ್ಧೆ ಮಾಡಬೇಕು ಎಂದು ಇಚ್ಛೆ ಹೊಂದಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಅಂತಿಮವಾಗಿ ವರಿಷ್ಠರು ಯಾವ ಸೂಚನೆ ಕೊಡುತ್ತಾರೋ ಅದನ್ನು ಪಾಲಿಸುತ್ತೇನೆ. ಅವರು ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದರಿಂದ ಸಹಜವಾಗಿ ಕಾರ್ಯಕರ್ತರು ಶಿಕಾರಿಪುರದಿಂದಲೇ ಸ್ಪರ್ಧಿಸಿ ಎಂದು ಒತ್ತಡ ಹೇರಿದ್ದಾರೆ. ಹಾಗಾಗಿ, ಶಿಕಾರಿಪುರದಲ್ಲಿ ಸ್ಪರ್ಧೆಗೆ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದೇನೆ. ಅಂತಿಮ ನಿರ್ಧಾರ ವರಿಷ್ಠರದ್ದು, ಯಾವುದೇ ಗೊಂದಲ್ಲ ಇಲ್ಲ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾರವರ ಜತೆ ಇಂದು ಪಕ್ಷದ ಬೆಳವಣಿಗೆ, ಸಂಘಟನೆ, ಚುನಾವಣಾ ತಂತ್ರಗಾರಿಕೆ ಗ್ಗೆ ಚರ್ಚಿಸಲಾಗಿದೆ. ಉಳಿದಂತೆ ಯಾವುದೇ ರಹಸ್ಯ ಚರ್ಚೆಗಳು ನಡೆದಿಲ್ಲ. ವರಿಷ್ಠರ ಸೂಚನೆಯನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.