ಕ್ಷೇತ್ರೋತ್ಸವ “ನೂತನ ಕೃಷಿ ತಾಂತ್ರಿಕತೆ ಅಳವಡಿಸಲು ಸಲಹೆ”

ಕಲಬುರಗಿ:ಜ.5:ಬದಲಾಗುತ್ತಿರುವ ಹವಾಮಾನದಿಂದ ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರುವುದಿರಂದ ಕೃಷಿ ವಿಜ್ಞಾನಿಗಳೊಂದಿಗೆ ಚರ್ಚಿಸಿ ಪ್ರದೇಶಕ್ಕೆ ಸೂಕ್ತವಾದ ಕೃಷಿ ತಾಂತ್ರಿಕತೆಗಳನ್ನು ಅಳವಡಿಸುವಂತೆ ಕೃ.ವಿ. ಧಾರವಾಡ ವಿಶ್ರಾಂತ ಕುಲಪತಿಗಳಾದ ಡಾ|| ಎಸ್.ಎ. ಪಾಟೀಲ್ ತಿಳಿಸಿದರು. ನಗರದ ಆಳಂದ ರಸ್ತೆಯಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಕೃಷಿ ಇಲಾಖೆ ಮತ್ತು ಮೈರಾಡ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಕ್ಷೇತ್ರೋತ್ಸವದಲ್ಲಿ ಅವರು ಉದ್ಘಾಟಿಸಿ ಕ್ಷೇತ್ರ ವೀಕ್ಷಿಸಿ ರೈತರು ಹಾಗೂ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಿದರು.

ರಾಯಚೂರು ಕೃ.ವಿ.ವಿ. ವಿಸ್ತರಣಾ ನಿರ್ದೇಶಕರಾದ ಡಾ|| ಡಿ.ಎಂ. ಚಂದರಗಿ ರೈತರೊಂದಿಗೆ ಕ್ಷೇತ್ರ ವೀಕ್ಷಿಸಿ ನೈಸರ್ಗಿಕ ಹಾಗೂ ಸಾವಯವ ಕೃಷಿಯಿಂದ ಕಡಿಮೆ ಖರ್ಚಿನಿಂದ ಆರೋಗ್ಯಕರ ಸಮಾಜ ನಿರ್ಮಿಸಿ ಉತ್ತಮ ಇಳುವರಿ ಪಡೆಯಬಹುದಾಗಿ ಎಂದರು. ರೈತ ಒಕ್ಕೂಟ ಗುಂಪುಗಳನ್ನು ರಚಿಸಿ ಅನ್ವೇಷಣೆ ನಿರತ ರೈತರಿಗೆ ತರಬೇತಿ ನೀಡುವಂತೆ ಸಲಹೆ ನೀಡಿದರು. ಒಣ ಸನ್ನಿವೇಶದಲ್ಲಿ ಅಲ್ಪಾವಧಿ ಹಾಗೂ ರೋಗನಿರೋಧಕ ತಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕೃಷಿ ವಿಜ್ಞಾನಿಗಳಿಂದ ಸಮರ್ಪಕ ಮಾಹಿತಿ ಪಡೆದು ಹೊಲದಲ್ಲಿ ನೂತನ ತಂತ್ರಜ್ಞಾನ ಅಳವಡಿಸಲು ಸಲಹೆ ನೀಡಿದರು.

ಕಡಲೆಗೆ ಹಾಗೂ ತೊಗರಿಗೆ ನೆಟೆರೋಗ ನಿರೋಧಕ ನೂತನ ತಳಿ ಬಿಡುಗಡೆ ಮಾಡುವಂತೆ ಕೃಷಿ ಸಮಾಜ ಅಧ್ಯಕ್ಷರಾದ ಡಾ|| ಸಿದ್ರಾಮಪ್ಪ ದಂಗಾಪುರ ಸಲಹೆ ನೀಡಿದರು. ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಗುರುಶಾಂತ ಪಾಟೀಲ್, ಡಾ|| ಸುರೇಶ ಎಸ್. ಪಾಟೀಲ್ ಡೀನ್ (ಕೃಷಿ), ಸಹ ಸಂಶೋಧನಾ ಅಧ್ಯಕ್ಷರಾದ ಡಾ|| ಎಂ. ಎಂ. ಧಾನೋಜಿ, ಕೆವಿಕೆ ಮುಖ್ಯಸ್ಥರಾದ ಡಾ|| ರಾಜು ತೆಗ್ಗೆಳ್ಳಿ, ಕ್ಷೇತ್ರ ಅಧೀಕ್ಷಕರಾದ ಡಾ|| ರಾಚಪ್ಪ ಹಾವೇರಿ ಹಾಗೂ ಕೆವಿಕೆ ವಲಯ ಸಂಶೋಧನಾ ಕೇಂದ್ರ ವಿಜ್ಞಾನಿಗಳು, ಕೃಷಿ ತಾಕುಗಳಲ್ಲಿ ರೈತರಿಗೆ ಕೃಷಿ ತಂತ್ರಜ್ಞಾನಗಳಾದ ವಿವಿಧ ತೊಗರಿ ತಳಿಗಳು, ಕಡಲೆ ತಳಿಗಳು, ಎರೆಹುಳು ಘಟಕ ಪ್ರಾತ್ಯಕ್ಷಿಕೆ, ಸಮಗ್ರ ಕೃಷಿ ಪದ್ಧತಿ, ಕಲ್ಲಂಗಡಿ ಕೃಷಿ, ಮೇಲ್ಚಾವಣಿ ತೋಟಗಾರಿಕೆ, ಸಾವಯವ ಕೃಷಿ ಪ್ರಾತ್ಯಕ್ಷಿಕ ಘಟಕ, ನಿರ್ವಾತ ಕಂತೆ ಕಟ್ಟುವಿಕೆ, ಜೇನು ಸಾಕಣೆ ಹಾಗೂ ದ್ವಿದಳ ಧಾನ್ಯಗಳ ಸುಧಾರಿತ ಬೇಸಾಯ ಕ್ರಮಗಳು, ಸಸ್ಯ ಸಂರಕ್ಷಣೆ, ಮಣ್ಣು ಮತ್ತು ನೀರು ಪರೀಕ್ಷೆಯ ಮಹತ್ವ, ಮಳೆ ನೀರು ಕೊಯ್ಲು ತಾಂತ್ರಿಕತೆ, ಜಾನುವಾರು ತಳಿಗಳ ಸಾಕಾಣಿಕೆ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಹಾಗೂ ಸಂಬಂಧಿತ ಕೃಷಿ ಮಾಹಿತಿಯನ್ನು ಮಾಹಿತಿ ನೀಡಿದರು. ಮೈರಾಡ ಸಂಸ್ಥೆಯಿಂದ ಶ್ರೀ. ಎಸ್.ಡಿ.ಕಲ್ಯಾಣ ಶೆಟ್ಟಿ, ಅಂತಿಮ ವರ್ಷದ ಕ್ರಷಿ ವಿದ್ಯಾರ್ಥಿಗಳು ಹಾಗೂ 800 ಕ್ಕಿಂತ ಹೆಚ್ಚು ರೈತರು ಕ್ಷೇತ್ರೋತ್ಸವದಲ್ಲಿ ತಂತ್ರಜ್ಞಾನವನ್ನು ವೀಕ್ಷಿಸಿದರು.

ಕೃಷಿ ಇಲಾಖೆ ಆತ್ಮಾ ಯೋಜನೆ ಕ್ರಷಿ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು. ಜಂಟಿ ಕೃಷಿ ನಿರ್ದೇಶಕರಾದ ಶ್ರೀ. ರತೀಂದ್ರನಾಥ ಸೂಗೂರ ಹಾಗೂ ಉತ್ತರ ಕರ್ನಾಟಕದ ತೊಗರಿ ಸಂಘದ ಅಧ್ಯಕ್ಷರಾದ ಶ್ರೀ. ಬಸವರಾಜ ಇಂಗಿನ, ನಿವೃತ್ತಿ ಪ್ರಧಾನ ವಿಜ್ಞಾನಿಗಳಾದ ಶ್ರೀ. ಜೆ.ಆರ್. ಪಾಟೀಲ್, ಡಾ|| ಆರ್.ಸಿ.ಗುಂಡಪ್ಪಗೋಳ, ತೊಗರಿ ವಿಜ್ಞಾನಿಗಳಾದ ಡಾ|| ಎಸ್. ಮುನಿಸ್ವಾಮಿ, ಬೇಸಾಯ ಶಾಸ್ತ್ರರಾದ ಡಾ|| ಪಂಡಿತ ರಾಠೋಡ, ಡಾ|| ಡಿ.ಹೆಚ್. ಪಾಟೀಲ್, ಡಾ|| ಯುಸುಫ್ ಅಲಿ, ಡಾ|| ಮಲ್ಲಿಕಾರ್ಜುನ ಕೆಂಗನಾಳ, ಡಾ|| ಜಹೀರ್ ಅಹಮ್ಮದ್, ಡಾ|| ಮಂಜುನಾಥ ಪಾಟೀಲ್, ಡಾ|| ಶೀಲಾ ಡಿ. ಡಾ|| ಬಾಲಕೃಷ್ಣಾ ರೆಡ್ಡಿ, ಡಾ|| ವಾಸುದೇವ ನಾಯ್ಕ, ಡಾ|| ಶ್ರೀನಿವಾಸ ಬಿ.ವಿ, ಡಾ|| ಹನುಮಂತ ನಾಯ್ಕ ಉಪಸ್ಥಿತರಿದ್ದರು.