ಕ್ಷೇತ್ರಾಭಿವೃದ್ಧಿಗೆ ದೂರದೃಷ್ಟಿ ಬೇಕು   -ಮುಖ್ಯಮಂತ್ರಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಏ 17: ಜನರ ಸವಾಲುಗಳನ್ನು ಅರಿತು, ಅದಕ್ಕೆ ಪರಿಹಾರ ಕಲ್ಪಿಸುವ ಚಿಂತನೆ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿದ್ಧಾರ್ಥ ಸಿಂಗ್ ದೂರ ದೃಷ್ಟಿ ಹೊಂದಿದ್ದಾರೆ, ಇಂತಹ ವ್ಯಕ್ತಿತ್ವ ಹೊಂದಿರುವ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಭಾನುವಾರ ಸಂಜೆ ಹೊಸಪೇಟೆಯಲ್ಲಿ ಆಯೋಜಿಸಿದ್ದ ಸಮಾನ ಮನಸ್ಕರರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಸಚಿವ ಆನಂದ ಸಿಂಗ್ ಚುನಾವಣೆಯಿಂದ ಹಿಂದೆ ಸರಿದರು. ನನಗೆ ಪವರ್ ಪಾಲಿಟಿಕ್ಸ್ ಬೇಡ. ಪೀಪಲ್ಸ್ ಪಾಲಿಟಿಕ್ಸ್ ಬೇಕು ಎಂದು ಬಿಜೆಪಿ ಶಾಕ್ ನೀಡಿದರು.  ಆದರೆ, ಅವರನ್ನು ಮೀರಿಸುವಂತಹ ಅಭ್ಯರ್ಥಿಯನ್ನು ವಿಜಯನಗರ ಕ್ಷೇತ್ರಕ್ಕೆ ನೀಡಿದ್ದಾರೆ. ಅಭಿವೃದ್ಧಿ ವಿಚಾರ, ಜನಪರ ಕಾಳಜಿಯಲ್ಲಿ ಸಿದ್ಧಾರ್ಥಸಿಂಗ್ ಆನಂದ್‍ಸಿಂಗ್‍ರನ್ನು ಮೀರಿಸಲಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ವಿಜಯನಗರ ಜಿಲ್ಲೆಯನ್ನಾಗಿಸಬೇಕು ಎಂಬುದು 30 ವರ್ಷಗಳ ಬೇಡಿಕೆಯಾಗಿತ್ತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ  ಆಯ್ಕೆಯಾಗಿದ್ದ ಆನಂದ ಸಿಂಗ್ ಅವರ ಪ್ರತ್ಯೇಕ ಜಿಲ್ಲೆಯ ಬೇಡಿಕೆಗೆ ಮನ್ನಣೆ ದೊರೆಯಲಿಲ್ಲ. ಎಂದು ತನ್ನ ಮಾತೃಪಕ್ಷಕ್ಕೆ ಬರುವ ಮೂಲಕ ಜಿಲ್ಲಾರಚನೆ  ಅಸಾಧ್ಯವೆಂದು ಅರಿತಿದ್ದರೂ, ಅದನ್ನು ಸಾಧ್ಯವಾಗಿಸಿದರು. ನೂತನ ಜಿಲ್ಲೆಯ ಜಿಲ್ಲಾಡಳಿತ ಭವನಕ್ಕೆ 83 ಎಕರೆ ಜಾಗೆ ಒದಗಿಸಿದ್ದಾರೆ. 240 ಕೋಟಿ ರೂ. ಮೊತ್ತದಲ್ಲಿ ಏತ ನೀರಾವರಿ ಜಾರಿಗೊಳಿಸಿದ್ದಾರೆ. ಗುಡ್ಡಕ್ಕೆ ಹಗ್ಗ ಕಟ್ಟಿ, ಎಳೆಯುವುದು ಆನಂದ್‍ಸಿಂಗ್ ಕೆಲಸ ಆನಂದ್‍ಸಿಂಗ್ ಪ್ರವಾಸೋದ್ಯಮ ಸಚಿವರಾಗಿ ಹಲವಾರು ಕೆಲಸ ಮಾಡಿದ್ದಾರೆ. ಹಂಪಿಯಿಂದ ವಿಜಯಪುರದವರಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಹಂಪಿ ಸರ್ಕೀಟ್ ಮಾಡಿದೆ ಪ್ರವಾಸೋದ್ಯಮ ಬೆಳವಣಿಗೆಗೆ ಆನಂದ ಸಿಂಗ್ ಕೊಡುಗೆ ಅವಿಸ್ಮರಣೀಯ ಎಂದರು.
ಚುನಾವಣೆಯಲ್ಲಿ ಸ್ಪರ್ಧೆ ಸಾಮಾನ್ಯ. ಆದರೆ, ಬಿಜೆಪಿಯ ಸಿದ್ಧಾರ್ಥ ಫೋಟೋ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಯ ಫೋಟೋ ನೋಡಿ ಕಣ್ಮುಚ್ಚಿಕೊಳ್ಳಿ. ನಂತರ ಯಾರಿಗೆ ಮತಚಲಾಯಿಸಬೇಕೆಂಬುದು ನಿರ್ಧಾರವಾಗುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಅವರನ್ನು ಹೆಸರಿಸದೆ ಲೇವಡಿ ಮಾಡಿದರು.

ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಆಗಿದ್ದಾರೆ. ಮುಖ್ಯಮಂತ್ರಿಯಾದರೂ ಸರಳ ವ್ಯಕ್ತಿಯಾಗಿದ್ದಾರೆ. ಸಿದ್ದಾರ್ಥ ಸಿಂಗ್‍ಗೆ ಯಾರೂ ರಾಜ, ಯುವರಾಜ ಎಂದು ಹೇಳಬೇಡಿ, ಸಿದ್ದಾರ್ಥ ಸಿಂಗ್ ಕ್ಷೇತ್ರದ ಯುವ ಸೇವಕ. ಸಿದ್ದಾರ್ಥ್‍ಗೆ ಜನ ಸೇವೆಯ ಹುಮ್ಮಸ್ಸಿದೆ ಎಂದರು.
ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಚಿವ ಆನಂದ್‍ಸಿಂಗ್ ಪುತ್ರ ಸಿದ್ಧಾರ್ಥಸಿಂಗ್ ಮಾತನಾಡಿ ಕಳೆದ 15 ವರ್ಷಗಳಲ್ಲಿ ಆನಂದ ಸಿಂಗ್ ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರನ್ನು ಮೀರಿಸುವಂತೆ  ನಾನು ಕೆಲಸ ಮಾಡುತ್ತೇನೆ. ಡಬಲ್ ಎಂಜಿನ್ ಸರ್ಕಾರಗಳಂತೇ ವಿಜಯನಗರ ಕ್ಷೇತ್ರದಲ್ಲೂ ಅಪ್ಪ-ಮಗ ಸೇರಿ ಡಬಲ್ ಎಂಜಿನ್‍ನಂತೇ ಕೆಲಸ ಮಾಡುತ್ತೇವೆ. ಜಿಲ್ಲೆ ಮಾಡಿಸಿದ್ದಾರೆ. 250 ಕೋಟಿ ರು. ವೆಚ್ಚದ ಏತ ನೀರಾವರಿ ತಂದಿದ್ದಾರೆ. 250 ಹಾಸಿಗೆ ಆಸ್ಪತ್ರೆ ಮಾಡಿಸಿದ್ದಾರೆ. ಆನಂದ್‍ಸಿಂಗ್ ಗ್ಯಾರೆಂಟಿ ಕಾರ್ಡ್, ನಾನು ವಾರೆಂಟಿ ಕಾರ್ಡ್ ಇದ್ದಂತೆ ಎಂದರು.
ಸಂಸದ ದೇವೆಂದ್ರಪ್ಪ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮಂಡಳ ಅಧ್ಯಕ್ಷ ಕಸಾಟಿ ಉಮಾಪತಿ ವೇದಿಕೆಯಲ್ಲಿದ್ದರು.