ಕ್ಷೇತ್ರಾದ್ಯಂತ ಬಿಜೆಪಿ ಅಲೆ. ಗೆಲುವು ನಿಶ್ಚಿತ: ಸವದಿ

ಬಸವಕಲ್ಯಾಣ:ಎ.9: ಸಮೀಕ್ಷೆಯ ವರದಿ ಹಾಗೂ ಜನ ಬೆಂಬಲ ನೋಡಿದರೆ ಬಸವಕಲ್ಯಾಣ ಮತ ಕ್ಷೇತ್ರಾದ್ಯಂತ ಬಿಜೆಪಿ ಅಲೆ ಇದೆ. ನಮ್ಮ ಅಭ್ಯರ್ಥಿ ಶರಣು ಸಲಗರ ಮಾಡಿರುವ ಜನಸ್ನೇಹಿ ಹಾಗೂ ನಿಸ್ವಾರ್ಥ ಕಾರ್ಯಗಳೇ ಇದಕ್ಕೆ ಕಾರಣ. ಗೆಲುವು ನಿಶ್ಚಿತ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಗುರುವಾರ ಬೆಳಿಗ್ಗೆ ತಾಲ್ಲೂಕಿನ ಭೋಸ್ಗಾ ಗ್ರಾಮದಲ್ಲಿ ಗಣ್ಯರೊಂದಿಗೆ ಸಂವಾದಿಸಿ ಬಿಜೆಪಿ ಬೂತ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನ ಕೋಹಿನೂರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಅಲಗೂಡ, ಭೋಸ್ಗಾ, ಬಟಗೇರಾ, ಲಾಡವಂತಿ ಹಾಗೂ ಕೋಹಿನೂರ ಗ್ರಾಮಗಳಲ್ಲೂ ಡಿಸಿಎಂ ಸವದಿ ಅವರು ಬೂತ್ ಕಾರ್ಯಕರ್ತರ ಸಭೆ ನಡೆಸಿ, ರಾಜ್ಯ ಸರ್ಕಾರದ ವಿವಿಧ ಜನಪರ ಯೋಜನೆಗಳು ಕ್ಷೇತ್ರದ ಕಟ್ಟಕಡೆ ವ್ಯಕ್ತಿಗೆ ತಲುಪಬೇಕಾದರೆ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯ ಆಯ್ಕೆ ಅತ್ಯಾವಶ್ಯಕ. ಈ ಉಪ ಚುನಾವಣೆಯನ್ನು ಒಂದು ಸವಾಲಾಗಿ ಸ್ವೀಕರಿಸಿ ಶರಣು ಸಲಗರ ಅವರನ್ನು ಗೆಲ್ಲಿಸಲು ಅವಿರತ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.
ರಾಜಕುಮಾರ ಸಿರಗಾಪೂರ, ತಾಪಂ ಸದಸ್ಯ ವಿಶ್ವನಾಥ ಜಾಧವ, ಪಂಡಿತ ಪಾಟೀಲ್, ವಾಮನರಾವ ಬಿರಾದಾರ, ರಾಜೇಶ್ ಖೂಬಾ, ಸಂದಿಪ್ ಖೂಬಾ, ರಮೇಶ ಖೂಬಾ, ಮಹಾದೇವ, ಅಜಯ ದಂಡೆ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.