ಕ್ಷೇತ್ರಪತಿ ಸಿನಿಮಾ ಆಗಸ್ಟ್ 18ರಂದು ಬೆಳ್ಳಿತೆರೆಗೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು27: ಕೃಷಿಕರ ಬದುಕು, ಬಡ ರೈತರ ಸ್ಥಿತಿ, ಕೃಷಿಯಲ್ಲಿನ ಸವಾಲುಗಳನ್ನು ತೆರೆದಿಡುವ ಬಹುನಿರೀಕ್ಷಿತ ಕ್ಷೇತ್ರಪತಿ ಸಿನಿಮಾ ಆಗಸ್ಟ್ 18ರಂದು ರಾಜ್ಯಾದ್ಯಂತ 125 ಥೇಟರ್‍ಗಳಲ್ಲಿ ತೆರೆ ಕಾಣಲಿದ್ದು, ಕನ್ನಡ ಚಿತ್ರಪೇಮಿಗಳ ಮನ ಸೆಳೆಯಲಿದೆ ಎಂದು ಚಿತ್ರದ ನಾಯಕ ನಟ ನವೀನ್ ಶಂಕರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹುಡುಗರೇ ಸೇರಿ ಈ ಚಿತ್ರ ಮಾಡಿದ್ದೇವೆ. ಕೃಷಿಕರ ಬದುಕು, ಬಡ ರೈತರ ಸ್ಥಿತಿ, ಕೃಷಿಯಲ್ಲಿನ ಸವಾಲುಗಳನ್ನು ಈ ಚಿತ್ರ ತೆರೆದಿಡುತ್ತದೆ. ಇದೊಂದು ಪಕ್ಕಾ ಉತ್ತರ ಕರ್ನಾಟಕ ಭಾಷಾ ಸೊಗಡಿನ ಚಿತ್ರವಾಗಿದ್ದು, ಗದಗ, ಲಕ್ಕುಂಡಿ ಸುತ್ತಮುತ್ತ ಸಿನಿಮಾ ಶೂಟಿಂಗ್ ನಡೆದಿದೆ. ಗದಗ ಮೂಲದ ನಿರ್ದೇಶಕ ಶ್ರೀಕಾಂತ್ ಕಟಗಿ ನಿರ್ದೇಶನ ಮಾಡಿದ್ದಾರೆ. ಸ್ನೇಹಿತರು ಸೇರಿ ನಿರ್ಮಾಣದ ಹೊಣೆ ಹೊತ್ತಿದ್ದೇವೆ. ಈ ಸಿನಿಮಾ ಗೆದ್ದರೆ, ಉತ್ತರ ಕರ್ನಾಟಕದ ಕಲಾವಿದರು ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ಬೇರೂರಲಿದ್ದಾರೆ. ಈ ಚಿತ್ರ ರೈತರು ಎದುರಿಸುತ್ತಿರುವ ಸವಾಲುಗಳನ್ನು ಬಿಂಬಿಸುವುದರ ಜೊತೆಗೆ ಸಮಾಜಕ್ಕೆ ಸಂದೇಶ ಕೂಡ ನೀಡುತ್ತದೆ. ಇದೊಂದು ಪಕ್ಕಾ ಕೌಟುಂಬಿಕ ಚಿತ್ರವಾಗಿದೆ ಎಂದರು.
ಈಗಾಗಲೇ ಸಿನಿಮಾ ಟೀಸರ್‍ಅನ್ನು ಜನ ಮೆಚ್ಚಿದ್ದಾರೆ. ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ ಪಾತ್ರ ಮಾಡಿದ್ದಾರೆ. ಖಂಡಿತ ಈ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಲಿದೆ. ರಂಗಭೂಮಿಯಲ್ಲಿ ನಟನೆ ಮಾಡಿರುವ ಹಲವು ಕಲಾವಿದರು ಕೆಲಸ ಮಾಡಿದ್ದಾರೆ. ಹೊಸಪೇಟೆ, ವಿಜಯಪುರ, ಗದಗ, ಹುಬ್ಬಳ್ಳಿ, ಬಾಗಲಕೋಟ ಸೇರಿದಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಶೇ.90ರಷ್ಟು ಕಲಾವಿದರು ಈ ಭಾಗದವರೇ ಆಗಿದ್ದಾರೆ ಎಂದರು.
ನಾಯಕ ನಟಿ ಅರ್ಚನಾ ಜೋಯಿಸ್ ಮಾತನಾಡಿ, ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟನೆ ಮಾಡಿರುವೆ. ಹೊಂದಿಸಿ ಬರೆಯಿರಿ ಸಿನಿಮಾದಲ್ಲೂ ನಟನೆ ಮಾಡಿರುವೆ. ಕೆಜಿಎಫ್‍ನಲ್ಲಿ ಯಶ್ ತಾಯಿ ಪಾತ್ರ ನಿಭಾಯಿಸಿರುವೆ. ಈ ಚಿತ್ರದಲ್ಲಿ ನಾಯಕಿಯಾಗಿದ್ದು, ವರದಿಗಾರ್ತಿಯಾಗಿ ನಾಯಕ ಎತ್ತುವ ಸವಾಲುಗಳಿಗೆ ಧ್ವನಿಗೂಡಿಸಿರುವೆ. ಇದೊಂದು ಉತ್ತಮ ಸಿನಿಮಾ ಆಗಿದೆ ಎಂದರು.
ನಟರಾದ ರಾಹುಲ್ ಐನಾಪುರ, ಹರ್ಷ ಅರ್ಜುನ ಮಾತನಾಡಿ, ಈ ಸಿನಿಮಾ ಉತ್ತರ ಕರ್ನಾಟ ಭಾಗದ ಕಲಾವಿದರಿಗೆ ಆಶ್ರಯ ನೀಡಿದೆ. ಕೋವಿಡ್ ಬಳಿಕ ಕೃಷಿಯಲ್ಲೇ ತೊಡಗಿಸಿಕೊಂಡಿರುವ ಬಹುತೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೃಷಿಯ ನೈಜ ಚಿತ್ರಣವನ್ನು ಈ ಚಿತ್ರ ಕಟ್ಟಿಕೊಟ್ಟಿದೆ. ಖಂಡಿತ ಚಿತ್ರ ಗೆಲ್ಲುವ ವಿಶ್ವಾಸ ಇದೆ ಎಂದರು. ನಟರಾದ ಸರ್ದಾರ್, ಮಲ್ಲನಗೌಡ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.