ಕ್ಷೇತ್ರದ 70 ಸಾವಿರ ಎಕರೆ ನೀರಾವರಿ ಸೌಲಭ್ಯಕ್ಕೆ ನಾಡಿನ ದೊರೆ ತಥಾಸ್ತು ಅನ್ನಬೇಕು : ಶಾಸಕ ಲಕ್ಷ್ಮಣ ಸವದಿ

ಅಥಣಿ :ಆ.12: ಕ್ಷೇತ್ರದಲ್ಲಿ ಇನ್ನೂ 70 ಸಾವಿರ ಎಕರೆ ಜಮೀನು ನೀರಾವರಿಯಿಂದ ವಂಚಿತವಾಗಿದ್ದು, ಇದಕ್ಕೆ ಅವಕಾಶ ಕಲ್ಪಿಸಬೇಕು.ಅದೇ ರೀತಿ ಕೃಷ್ಣಾ ತೀರದ ಒಂಬತ್ತು ಹಳ್ಳಿಗಳಿಗೆ ಶಾಶ್ವತ ಪುನರ್ವಸತಿ ಮತ್ತು ಸವಳು-ಜವಳು ಜಮೀನು ಸಮಸ್ಯೆಯಿಂದ ಬಾಧಿತ ಗೊಂಡಿರುವ ಜಮೀನುಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ, ಸಿಎಂ ಡಿಸಿಎಂ ಅವರಿಗೆ ಮನವಿ ಮಾಡಿದರು,
ಅವರು ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಿರ್ಮಿಸಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿಎಂ, ಡಿಸಿಎಂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗಂಡು ಮೆಟ್ಟಿದ ನಾಡು ಬೆಳಗಾವಿಗೆ ಆಗಮಿಸಿದ್ದಾರೆ.
ಸಿಎಂ ಹಾಗೂ ಡಿಸಿಎಂ ಬಳಿ ನಾನು ಏನು ಕೇಳಬೇಕು ಏನು ಕೇಳಬಾರದು ಅನ್ನೋ ಗೊಂದಲದಲ್ಲಿದ್ದೇನೆ. ನಾನು ಕೇಳುವ ಮೊದಲೇ ಅವರು ಎಲ್ಲವನ್ನು ಕೊಡ್ತಾರೆ ಅನ್ನೋ ಭಾವ ಅವರ ಮುಖದಲ್ಲಿ ಕಾಣಿಸುತ್ತಿದೆ, ಅಥಣಿ ಹಾಗೂ ಕಾಗವಾಡ ಭಾಗದಲ್ಲಿರುವ ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ ಒದಗಿಸಿಕೊಡಬೇಕು, ನಮ್ಮ ಮತಕ್ಷೇತ್ರದ ಜನರ ಋಣವನ್ನು ತೀರಿಸಲು ಅವಕಾಶ ನೀಡಬೇಕು, ಎಂದ ಅವರು ಕೃಷಿ ಮಹಾವಿದ್ಯಾಲಯ ಕಾಮಗಾರಿ ಪ್ರಾರಂಭಿಸಲು ತಕ್ಷಣಕ್ಕೆ 20 ಕೋಟಿ ಒದಗಿಸಬೇಕು. ನಂತರ ಉಳಿದ ಅನುದಾನ ಹಂತಹಂತವಾಗಿ ಒದಗಿಸಬೇಕು ಎಂದರು,
ಬರಗಾಲದ ಪ್ರದೇಶದಲ್ಲಿರೋ ಈ ಭಾಗದ ರೈತರಿಗೆ ಶಕ್ತಿ ತುಂಬಬೇಕಾಗಿದೆ ಒಣದ್ರಾಕ್ಷಿಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಒದಗಿಸಿ ಕೊಡುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.
ಭಾಗದ ಒಣ ದ್ರಾಕ್ಷಿಯನ್ನು ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಖರೀದಿಸಿ ಅಂಗನವಾಡಿಗಳಿಗೆ, ಶಾಲಾ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ ತಯಾರಿಕೆಗೆ ಉಪಯೋಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಲಕ್ಷ್ಮಣ ಸವದಿ ವಿನಂತಿಸಿದರು.