
ಬ್ಯಾಡಗಿ,ಮಾ5 : ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು ಕೇವಲ 3ವರ್ಷ 9ತಿಂಗಳಾಯ್ತು.. ಈ ಅವಧಿಯಲ್ಲಿ 1800ಕೋಟಿ ಅನುದಾನ ತರುವ ಮೂಲಕ ಬ್ಯಾಡಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಿಡಗೂರ ಗ್ರಾಮದಲ್ಲಿ ಪಂಚಾಯತರಾಜ್ ತಾಂತ್ರಿಕ ಉಪವಿಭಾಗದ ವತಿಯಿಂದ 45ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ದಿಡಗೂರ -ಬಿದರಗಡ್ಡಿ ರಸ್ತೆ ಕಾಮಗಾರಿ ಹಾಗೂ ನಿರ್ಮಿತಿ ಕೇಂದ್ರದ ವತಿಯಿಂದ 20ಲಕ್ಷ ರೂಗಳ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾವು ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ತನ್ನ 14ತಿಂಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೇವಲ 20ಕೋಟಿ ಅನುದಾನವನ್ನು ನೀಡಿತ್ತು. ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ಅನುದಾನ ಒದಗಿಸಲು ಹೆಚ್ಚಿನ ಒತ್ತಡ ತಂದರೂ ಸಾಧ್ಯವಾಗಿದ್ದಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರ ಮತ್ತು ರಾಜ್ಯದ ಜನತೆಯ ಅದೃಷ್ಟವೆಂಬಂತೆ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ. ಕನಸಿನ ನೀರಾವರಿ ಯೋಜನೆಗಳು ನನಸಾಗಿ ಕೆರೆ ತುಂಬಿಸುವ ಯೋಜನೆ ಲೋಕಾರ್ಪಣೆಗೊಂಡಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರಣೀಕರ್ತರಾಗಿದ್ದಾರೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಬಂಡಿವಡ್ಡರ ವಹಿಸಿದ್ದರು. ಗ್ರಾಪಂ ಸದಸ್ಯರಾದ ದಿವಾಕರ ಪೂಜಾರ, ಮಹಬೂಬ ನದಾಫ, ಮಹದೇವಪ್ಪ ದಾಸಣ್ಣನವರ, ಹಾವೇರಿ ಎಇಇ ಈಶಪ್ಪ, ಜೆಇ ಮಂಜುನಾಥ ಕೋಡಿಬಸನಗೌಡ್ರ, ಪಿಡಿಓ ಬಿ.ಎಚ್.ಹೊನ್ನತ್ತಿ, ಗುತ್ತಿಗೆದಾರ ಸಚಿನ್ ಸಪ್ತಸಾಗರ, ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.