(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಜು.1: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ತಾಲೂಕು ಮಟ್ಟದ ಅಧಿಕಾರಿಗಳ ಒಗ್ಗಟ್ಟಿನ ಶ್ರಮ ಅಗತ್ಯವಾಗಿದೆ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು
ಪಟ್ಟಣದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆ ಉದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಹೆಣ್ಣುಮಕ್ಕಳ ಹೆರಿಗೆ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಜತೆಯಲ್ಲಿ ಇತರೆ ಕಾಯಿಲೆಗಳಿಗೂ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗದ ಸೂಕ್ತ ಚಿಕಿತ್ಸೆ ಹುಮನಾಬಾದ್ ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುತ್ತಿದೆ. ಸರಕಾರಿ ಆಸ್ಪತ್ರೆಯಲ್ಲಿನ ವೈದ್ಯರಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರಿದ್ದಾರೆಯೇ ಎಂದು ತಾಲೂಕು ವೈದ್ಯಾಧಿಕಾರಿಗೆ ಪ್ರಶ್ನಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸರಕಾರಿ ಶಾಲೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಮಧ್ಯಾಹ್ನದ ಬಿಸಿಯೂಟ ನೀಡಬೇಕು. ಜತೆಗೆ ಎಲ್ಲ ಇಲಾಖೆಗಳ ಸಮಗ್ರ ಅಭಿವೃದ್ಧಿಗೆ ತಾಲೂಕ ಮಟ್ಟದ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಮಾತನಾಡಿ, ಅಕ್ರಮವಾಗಿ ಹೊರ ರಾಜ್ಯಗಳಿಂದ ಬಿತ್ತನೆ ಬೀಜ ಬರುತ್ತಿದೆ ಎಂದು ಬಹುತೇಕ ಜನರು ಕರೆ ಮಾಡುವ ಮೂಲಕ ಆರೋಪ ಮಾಡುತ್ತಿದ್ದಾರೆ. ಅಕ್ರಮ ಬೀಜ ಮಾರಾಟಕ್ಕೆ ಆಧಿಕಾರಿಗಳು ಕಡಿವಾಣ ಹಾಕುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ತಾಡಪತ್ರಿ ವಿತರಣೆ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎನ್ನುವುದು ಕೆಲ ರೈತರ ಆರೋಪವಾಗಿದೆ. ಹೀಗಾಗಿ ಸೂಕ್ತ ಸಮಯಕ್ಕೆ ತಾಡಪತ್ರಿ ವಿತರಣೆ ಮಾಡಬೇಕು. ಅಲ್ಲದೇ ಸರಕಾರದ ನಿಯಮಾನುಸಾರ ತಾಡಪತ್ರಿ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ಇತ್ತಿಚೆಗೆ ತಾಲೂಕಿನ ನಿಂಬೂರ ಸರಕಾರಿ ಪ್ರೌಢ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಘಟನೆ ಜರುಗಿತ್ತು. ವಿದ್ಯಾರ್ಥಿಗಳ ಪ್ರಾಣಕ್ಕೆ ಹಾನಿಯಾದರೆ ಅದಕ್ಕೆ ಹೊಣೆ ಯಾರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳಗೆ ಪ್ರಶ್ನಿಸಿದರು. ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಶಾಲೆ ಆವರಣ ಹಾಗೂ ಅಡುಗೆ ಕೋಣೆ ಸ್ವಚ್ಛತೆ ಕಾಪಾಡಬೇಕು. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಗೌತಮ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗೂಡಾಳ, ತಾಲೂಕು ವೈದ್ಯಾಧಿಕಾರಿ ಡಾ. ಶಿವಕುಮಾರ ಸಿದ್ಧೇಶ್ವರ, ವಲಯ ಅರಣ್ಯಾಧಿಕಾರಿ ಶಿವಕುಮಾರ, ರೇಷ್ಮೆ ವಿಸ್ತಾರಣಾಧಿಕಾರಿ ಡಿ ಬಿ ಪಾಟೀಲ್ , ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹುಮನಾಬಾದ್ ತಹಸೀಲ್ದಾರ್ ಅಂಜುಂ ಲಸ್ಕರ್, ಚಿಟಗುಪ್ಪ ತಹಸೀಲ್ದಾರ್ ರವೀಂದ್ರ ದಾಮಾ, ಹುಮನಾಬಾದ್ ತಾಪಂ. ಇಒ ದೀಪಿಕಾ ನಾಯ್ಕ್, ಬಸವಕಲ್ಯಾಣ ತಾಪಂ. ಇಒ ಕಿರಣ ಪಾಟೀಲ್, ತಾಪಂ. ಎಡಿ ಶಿವಲೀಲಾ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ ಹತ್ಯಾಳ್, ಸಹಾಯಕ ನಿರ್ದೇಶಕ ಡಾ. ಗೋವಿಂದ, ಪಿಎ??? ಮಂಜನಗೌಡ ಪಾಟೀಲ್, ಪಿಎ??? ಸವಿತಾ ದೇವಣಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಮಾತಿನ ಚಕಮಕಿ
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆ ಡಿ ಪಿ ಸಭೆಯಲ್ಲಿ ಈ ಮಧ್ಯೆ ಎಂಎಲ್‍ಸಿ ಭೀಮರಾವ್ ಪಾಟೀಲ ಇಲಾಖೆಯೊಂದರ ಮಾಹಿತಿ ಪಡೆಯಲು ಅಧಿಕಾರಿಗಳನ್ನು ಪ್ರಶ್ನಿಸಲು ಮುಂದಾದಾಗ ಶಾಸಕ ಡಾ| ಸಿದ್ದು ಪಾಟೀಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕೆಡಿಪಿ ಸಭೆಗೆ ಶಾಸಕರು ಅಧ್ಯಕ್ಷರು ಇರುತ್ತಾರೆ. ಯಾವುದೇ ಪ್ರಶ್ನೆ ಕೇಳಬೇಕಾದರೆ ನೇರವಾಗಿ ಇಲಾಖೆ ಅಧಿ ಕಾರಿಗಳಿಗೆ ತಾವೇ ವಿಚಾರಿಸಿದರೆಶಾಸಕರು ಕೆಡಿಪಿ ಸಭೆ ನಡೆಸುವುದು ಹೇಗೆ, ಶಾಸಕರ ಕೆಲಸವೇನು ಉಳಿಯುತ್ತೆ? ಹಾಗಾದರೆ ನಿವುಗಳೇ ಕೆಡಿಪಿ ಸಭೆ ನಡೆಸಿ ಎಂದು ಆಕ್ರೋಶಗೊಂಡರು.
ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲ ಕಾರ ನಡೆ ಯುತ್ತವೆ. ಎಂಎಲ್‍ಸಿಗಳು ಸಭೆಯ ಸದಸ್ಯರಾಗಿರುತ್ತಾರೆ. ಯಾವುದೇ ಪ್ರಶ್ನೆ ಕೇಳಬೇಕಾದರೆ ನಿಯಯಾನುಸಾರ ಸಭೆ ಅಧ್ಯಕ್ಷರಿಗೆ ಕೇಳಬೇಕು. ಅಧ್ಯಕ್ಷರು ಆಯಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ನೀಡುವ ಕೆಲಸ ಮಾಡುತ್ತಾರೆ. ಇಲಾಖೆವಾರು ಪ್ರಗತಿಗಳ ವಿವರಣೆ ನೀಡುವ ಸಂದರ್ಭದಲ್ಲಿ ಆಯಾ ಇಲಾಖೆಗಳ ಮಾಹಿತಿ ನಿಡುವ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದರು.