ಕ್ಷೇತ್ರದ ಜನರ ಆಶೋತ್ತರದಂತೆ ಅಭಿವೃದ್ಧಿ – ನವೀನಕುಮಾರ್


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.30: ನಮ್ಮನ್ನು ಆಯ್ಕೆಮಾಡುವ ಜನರ ಬೇಕುಬೇಡಗಳನ್ನು ಅರಿತು ಆಯಾ ಕ್ಷೇತ್ರಗಳ ಸಮಸ್ಯೆ ಹಾಗೂ ಅಗತ್ಯಗಳನ್ನು ಮತದಾರರಿಂದಲೇ ಪಡೆಯುವ ನಿಟ್ಟಿನಲ್ಲಿ ಪ್ರಣಾಳಿಕೆ ಸಲಹೆ ಸಂಗ್ರಹ ಅಭಿಯಾನ ಸಭೆ ನಡೆಸಲಾಗುತ್ತಿದೆ ಎಂದು ಪ್ರಣಾಳಿಕೆ ಸಲಹೆ ಸಂಗ್ರಹ ಅಭಿಯಾನ ಸಭೆಯ ಸಂಚಾಲಕ, ವಿಧಾನ ಪರಿಷತ್ ಸದಸ್ಯ ನವೀನಕುಮಾರ್ ಹೇಳಿದರು.
ಹೊಸಪೇಟೆಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಪ್ರಣಾಳಿಕೆ ಸಲಹೆ ಸಂಗ್ರಹ ಅಭಿಯಾನದಲ್ಲಿ ಮಾತನಾಡಿದರು. ಬಿಜೆಪಿ ತನ್ನ ನೇರಕ್ಕೆ ಪ್ರಣಾಳಿಕೆ ರೂಪಿಸುವ ಬದಲು ಕ್ಷೇತ್ರದ ನಿಜ ಬೇಡಿಕೆಗಳಿಗೆ ಮನ್ನಣೆ ನೀಡುವ ದೂರದೃಷ್ಟಿಯಿಂದ ಈ ಅಭಿಯಾನ ಆರಂಭಿಸಿದೆ. ಬಿಜೆಪಿ ಹೊರತು ಬೇರೆ ಪಕ್ಷಗಳ ಆಡಳಿತದಲ್ಲಿ ಅಭಿವೃದ್ಧಿ ಆಮೆಗತಿಯಲ್ಲಿತ್ತು.  ಭಾರತದಲ್ಲಿ ಆಗ ದಿನಕ್ಕೆ 4 ಕಿಮೀ. ರಾಷ್ಟ್ರೀಯ ಹೆದ್ದಾರಿ ಕಾರ್ಯ ನಡೆಯುತಿತ್ತು.  ಈಗ 40 ಕಿಮೀ ಕಾಮಗಾರಿ ನಡೆಯುತ್ತಿದೆ ಎಂದು ಉದಾಹರಣೆ ನೀಡಿದರು.
ವಾಣಿಜೋದ್ಯಮಿ ಸಂಘದ ಅಧ್ಯಕ್ಷ ಅಶ್ವಿನ್ ಕೋತಂಬರಿ ಮಾತನಾಡಿ, ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಕ್ಷೇತ್ರದ ಪ್ರಗತಿ ಮಾಡುವ ನಿಟ್ಟಿನಲ್ಲಿ ಈ ಅಭಿಯಾನ ಅರ್ಥಪೂರ್ಣವಾಗಿದೆ. ಎಂದರು.
ಯುವ ಮುಖಂಡ ಸಂದೀಪ್ ಸಿಂಗ್ ಮಾತನಾಡಿ, ಯೋಚನೆ ಯೋಜನೆ ರೂಪದಲ್ಲಿ ತಂದಾಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಇಂತಹ ಆಲೋಚನೆಯನ್ನು ಸಾಕಾರಗೊಳಿಸುವ ವ್ಯಕ್ತಿ ಎಂದರೆ ಅವರು ಆನಂದಸಿಂಗ್. ಈಗಾಗಲೇ ನಾಲ್ಕು ಅವಧಿಗೆ ಸೇವೆ ಮಾಡುವ ಭಾಗ್ಯ ಕರುಣಿಸಿದ್ದು, ಮತದಾರ ಹಾಗೂ ಕ್ಷೇತ್ರದ ಏಳಿಗೆಯನ್ನು ಸದಾ ಬಯಸುವವರಾಗಿದ್ದಾರೆ ಎಂದರು.
ಪ್ರಕಾಶ ಮಂತೋರೆ, ವಿಜಯನಗರ ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಎಸ್.ಆನಂದ, ಮುಖಂಡ ಅಯ್ಯಾಳಿ ತಿಮ್ಮಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಉಮಾಪತಿ ಕೆಸೆಟಿ, ಬಿಜೆಪಿ ಜಿಲ್ಲಾ ವಕ್ತಾರ ಅನಂತಸ್ವಾಮಿ ಪದ್ಮನಾಭ ಇದ್ದರು.