ಕ್ಷೇತ್ರದ ಅಭಿವೃದ್ಧಿ, ಜೆಡಿಎಸ್‌ದ್ದು ಸಿಂಹಪಾಲು

ರಾಮನಗರ,ಜು.೨೧: ರಾಮನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಜೆಡಿಎಸ್‌ನ ಸಿಂಹಪಾಲಿದೆ ಎಂದು ತಾಲೂಕು ಜೆಡಿಎಸ್ ಪ್ರಭಾರ ಅಧ್ಯಕ್ಷ ರಾಜಶೇಖರ್ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಶಾಸಕ ಇಕ್ಬಾಲ್ ಹುಸೇನ್ ಅವರ ರಾಮನಗರ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎಂಬ ವಿಷಯ ಪ್ರಸ್ತಾಪಕ್ಕೆ ಸ್ಪಷ್ಟನೆ ನೀಡಿ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಅವರು ಒಬ್ಬ ಜವಾಬ್ದಾರಿಯುತ ಶಾಸಕರಾಗಿ ವಿಧಾನಸಭೆಯಲ್ಲಿ ಮಾತನಾಡಬೇಕಿತ್ತು. ಆದರೆ, ಅವರು ರಾಮನಗರ ಅಭಿವೃದ್ಧಿ ಶೂನ್ಯ ಎಂದು ಮಾತನಾಡಿರುವುದು ಸರಿಯಲ್ಲ. ದೇವೇಗೌಡರು. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು, ಇಡೀ ಜಿಲ್ಲೆಯ ಜನರಿಗೆ ಅದು ಗೊತ್ತಿದೆ ಎಂದರು.
ದೇವೇಗೌಡರು ರಾಮನಗರ ಕ್ಷೇತ್ರದ ಶಾಸಕರಾದ ಸಂದರ್ಭದಲ್ಲಿ ಧೂಳು ಹಿಡಿದು ಜನರಿಗೆ ವ್ಯಾಪಾರಸ್ಥರಿಗೆ ಕಿರಿಕಿರಿ ತರಿಸಿದ್ದ ರೈಲ್ವೆ ಸ್ಟೇಷನ್ ರಸ್ತೆಗೆ ಕಾಯಕಲ್ಪ ನೀಡಿದ್ದಾರೆ. ಸಿಮೆಂಟ್ ರಸ್ತೆ ಮಾಡಿಸಿ, ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ನಡೆಯುವಂತೆ ಮಾಡಿದ್ದಾರೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ತಾಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡಿ, ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಹಲವು ಕಾಲೇಜುಗಳನ್ನು ತಂದು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಎಸ್‌ಪಿ ಕಚೇರಿ, ಕಂದಾಯ ಭವನ, ಜಿಲ್ಲಾಧಿಕಾರಿಗಳ ಕಚೇರಿ, ಮಿನಿ ವಿಧಾನಸೌಧ ನಿರ್ಮಾಣ, ಸುಸಜ್ಜಿತ ಹೈಟೆಕ್ ಜಿಲ್ಲಾಸ್ಪತ್ರೆ ಮಾಡಿ ಉತ್ತಮ ಕಟ್ಟಡಗಳು ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತುವಂತೆ ಮಾಡಿದ್ದಾರೆ. ಜನರಿಗೆ ಅನುಕೂಲ ಕಲ್ಪಿಸಿ ರಾಮನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು, ಹಾರೋಹಳ್ಳಿ ಕೇಂದ್ರವನ್ನು ೫ ತಿಂಗಳ ಹಿಂದಷ್ಟೆ ತಾಲೂಕು ಕೇಂದ್ರ ಮಾಡಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್ ಹಾರೋಹಳ್ಳಿ ತಾಲೂಕು ಕೇಂದ್ರಕ್ಕೆ ಮೂಲ ಸೌಕರ್ಯ ಇಲ್ಲ ಎಂದು ಪ್ರಶ್ನಿಸುತ್ತಾರೆ. ಎರಡು ತಿಂಗಳಿಂದ ತಾವು ಏನು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು.
ಜೆಡಿಎಸ್ ಮಾಧ್ಯಮ ಸಂಚಾಲಕ ಬಿ.ಉಮೇಶ್ ಮಾತನಾಡಿ, ಅನಿತಾ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಪ್ರಚಾರ ಪಡೆಯದೆ ಕೆಲಸ ಮಾಡಿದ್ದಾರೆ. ರಾಮನಗರಕ್ಕೆ ಕಾವೇರಿ ನೀರು, ಹಾರೋಹಳ್ಳಿ ತಾಲೂಕು ರಚನೆ, ೧೪೫೦ ಕೋಟಿ ರೂ. ಅನುದಾನ ತಂದು, ಕ್ಷೇತ್ರದ ಅಭಿವೃದ್ಧಿಗೆದುಡಿದಿದ್ದಾರೆ ಇದರಲ್ಲಿ ತಾವು ಐದು ವರ್ಷಗಳಲ್ಲಿ ಕೇವಲ ಶೇ೧೦% ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸಿ ಎಂದು ಸವಾಲು ಹಾಕಿದರು. ಕ್ಷೇತ್ರದ ಜನರಿಗೆ ಈ ರೀತಿ ಸುಳ್ಳು ಹೇಳುವ ಬದಲು ಮೊದಲು ಅಭಿವೃದ್ಧಿ ಮಾಡಿ ತೋರಿಸಿ ಜನರಿಂದ ಸೈ ಎನಿಸಿಕೊಳ್ಳಿ ಎಂದು ಮಾತಿನಲ್ಲೆ ಚಾಟಿ ಬೀಸಿದರು.
ನಗರಸಭೆ ಸದಸ್ಯ ಮಂಜುನಾಥ್ ಮುಖಂಡರಾದ ರಾಮಕೃಷ್ಣ, ಜಯ ಕುಮಾರ್ ಇದ್ದರು.