ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಜನ ನನ್ನನ್ನು ಗೆಲ್ಲಿಸಿದ್ದಾರೆ: ಎಚ್‍ಸಿಎಂ

ಸಂಜೆವಾಣಿ ವಾರ್ತೆ
ತಿ. ನರಸೀಪುರ:ಜು.03:- ಕಳೆದ ಒಂದು ದಶಕದಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಮತ್ತು ಕಳೆದ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಜನತೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಡೆಯಬೇಕು ಎಂಬ ದೃಷ್ಟಿಕೋನದಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹದೇವಪ್ಪ ತಿಳಿಸಿದರು.
ತಾಲೂಕಿನ ಸೋಸಲೆ ಗ್ರಾಮದಲ್ಲಿ ನಡೆದ ಚುನಾವಣೋತ್ತರ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಅವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೀನ ಆಡಳಿತವನ್ನು ಮನಗಂಡ ಕ್ಷೇತ್ರದ ಜನತೆ ಕ್ಷೇತ್ರ ಅಭಿವೃದ್ಧಿ ಕಾಣಬೇಕಾದಲ್ಲಿ ಮಹದೇವಪ್ಪ ಬೇಕು ಎಂಬ ದೃಷ್ಟಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ.ಹಾಗಾಗಿ ಕ್ಷೇತ್ರದ ಎಲ್ಲ ಮತದಾರರಿಗೂ ಧನ್ಯವಾದ ಅರ್ಪಿಸಿದರು.ಸೋಸಲೆ ಹೋಬಳಿಯಲ್ಲಿ ಕಾಂಗ್ರೆಸ್ ಪಕ್ಷದ ಮೂಲ ಮತದಾರರು ಹೆಚ್ಚಿದ್ದಾರೆ.ಅಲ್ಲದೆ ಎಲ್ಲ ಚುನಾವಣೆಗಳಲ್ಲೂ ಸೋಸಲೆ ಹೋಬಳಿಯ ಮತಗಳು ನಿರ್ಣಾಯಕ ಪಾತ್ರವಹಿಸಿವೆ.ಕಾಂಗ್ರೆಸ್ ಪಕ್ಷದ ಗೆಲುವಿಗೆ ಗ್ಯಾರಂಟಿ ಭರವಸೆ ಕಾರಣ ಎಂದು ವಿರೋಧಪಕ್ಷಗಳು ಹೇಳುತ್ತವೆ.ಆದರೆ, ಬಿಜೆಪಿ ದುರಾಡಳಿತ, ಮಿತಿಮೀರಿದ ಭ್ರಷ್ಟಾಚಾರ ಮತ್ತು ಜೆಡಿಎಸ್ ಪಕ್ಷದ ಹೊಂದಾಣಿಕೆಯ ಸಮಯ ಸಾಧಕತನವನ್ನು ಕಂಡು ಬೇಸತ್ತ ರಾಜ್ಯದ ಜನತೆ ಜಾತಿ ,ಧರ್ಮವನ್ನು ಬದಿಗಿಟ್ಟು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 136 ಸೀಟ್ ಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದರು.
ಬಿಜೆಪಿ ಪಕ್ಷಕ್ಕೆ ಕಳೆದ ಬಾರಿ ಜನಾದೇಶ ಇರಲಿಲ್ಲ.ವಾಮಮಾರ್ಗದಲ್ಲಿ ಬಂದ ಅಧಿಕಾರದ ಅಮಲಿನಿಂದ ಬಿಜೆಪಿ ಪಕ್ಷ ರಾಜ್ಯದ ಜನತೆ ಮೇಲೆ ಗದಾಪ್ರಹಾರ ನಡೆಸಲು ಆರಂಭಿಸಿತು.ಇದರಿಂದ ಬೇಸತ್ತ ಜನತೆ ಸಂಪೂರ್ಣ ಕಾಂಗ್ರೆಸ್ ಪಕ್ಷದ ಪರ ನಿಂತರು.ಈ ಬಾರಿ ಮೈಸೂರು ಜಿಲ್ಲೆಯಲ್ಲಿ 13ಮೀಮೀ ಕಡಿಮೆ ಮಳೆ ಆಗಿದೆ.ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದು,ರೈತರ ಬೇಸಾಯಕ್ಕೆ ತೊಂದರೆ ಆಗದಂತೆ ಸೂಕ್ತ ವಹಿಸಲಾಗುವುದು.ಮೈಸೂರು ಜಿಲ್ಲೆ,ನಗರ ಅಭಿವೃದ್ಧಿ ಕೆಲಸ ಮಾಡಲು ಅನುಭವಿ ಅಧಿಕಾರಿಗಳ ತಂಡದ ರಚಿಸಿದ್ದು,ಸಂಪೂರ್ಣ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಹೊಸ ಕಾರ್ಯಸೂಚಿ ರಚಿಸಲಾಗುವುದು ಎಂದರು.
ಐದು ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಸಿದ್ದವಿದೆ.ಗೃಹಜ್ಯೋತಿ,ಗೃಹಲಕ್ಷ್ಮಿ,ಯುವನಿಧಿ ,ಅನ್ನಭಾಗ್ಯ ಮತ್ತು ಉಚಿತ ಬಸ್ ಪ್ರಯಾಣ ನೆರವೇರಿಸಲು ನಮ್ಮ ಸರ್ಕಾರ ಕಂಕಣಬದ್ದವಾಗಿದೆ.ಅನ್ನಭಾಗ್ಯ ಯೋಜನೆಗೆ ಅಕ್ಕಿಯ ಅಲಭ್ಯತೆಯಿಂದ ಐದು ಕೆಜಿ ಅಕ್ಕಿಯ ಜೊತೆ ಪ್ರತಿವ್ಯಕ್ತಿಗೆ ಹಣವನ್ನು ನೀಡಲು ನಿರ್ಧಾರಿಸಲಾಗಿದೆ.ರಾಜ್ಯದ ಜನತೆಯ ವಿರುದ್ಧವಿರುವ ಎಪಿಎಂಸಿ ಕಾಯ್ದೆ,ಭೂ ಸುಧಾರಣೆ ಕಾಯ್ದೆ,ಮತಾಂತರ ನಿಷೇಧ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧಾರಿಸಲಾಗಿದೆ.ವೈವಿಧ್ಯತೆಯಲ್ಲಿ ಏಕತೆ ಕಾಣುವುದು ಭಾರತದ ಸಂಸ್ಕೃತಿ.ಸಂವಿಧಾನ ಪ್ರಕಾರ ಭಾರತದ ಪ್ರಜೆ ಸ್ವಇಚ್ಛೆಯಿಂದ ಯಾವುದೇ ಧರ್ಮದಲ್ಲಿ ಜೀವಿಸಬಹುದಾದ ಹಕ್ಕು ಇದೆ ಎಂದರು.
ಮಾಜಿ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಸುನಿಲ್ ಬೋಸ್ ಮಾತನಾಡಿ, ಈ ಬಾರಿ ಮತದಾರರು ತಮ್ಮ ಶಕ್ತಿ ಮೀರಿ ನಮ್ಮನ್ನು ಗೆಲ್ಲಿಸಿದ್ದೀರಿ.ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಮೊದಲ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ.ಸೋಸಲೆ ಹೋಬಳಿಯು ಕಾಂಗ್ರೆಸ್ ಪಕ್ಷದ ಭದ್ರಕೋಟೆ.ಹಲವು ರಾಜಕೀಯ ಮುಖಂಡರು ಕಾಂಗ್ರೆಸ್ ಮತ್ತು ನನ್ನ ತಂದೆಯವರ ಬಗ್ಗೆ ಅಪಪ್ರಚಾರ ಮಾಡಿದರು.ಆದರೆ,ಕ್ಷೇತ್ರದ ಜನತೆ ನಮ್ಮನ್ನು ನಂಬಿ ನಮ್ಮ ಬೆಂಬಲಕ್ಕೆ ನಿಂತಿದ್ದೀರಿ.ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ,ಸಿಂಡಿಕೇಟ್ ಮಾಜಿ ಸದಸ್ಯ ಕೆ.ಮಹದೇವ್, ಮಾಜಿ ಪೀಕಾರ್ಡ್ ಅಧ್ಯಕ್ಷ ವಜ್ರಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಡಿ. ಬಸವರಾಜು, ಮಾಜಿ ಜಿ. ಪಂ. ಸದಸ್ಯ ಹೊನ್ನನಾಯಕ,ಅನಿಲ್ ಬೋಸ್,ಸೋಸಲೆ ಗ್ರಾ.ಪಂ.ಅಧ್ಯಕ್ಷ ಮಹೇಶ್, ಮಾಜಿ ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಮಾಜಿ ತಾ.ಪಂ. ಸದಸ್ಯರಾದ ಕೆಬ್ಬೆ ಶಿವಸ್ವಾಮಿ, ರಂಗಪ್ಪ, ನರಸಿಂಹಮಾದ ನಾಯಕ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಪರಶಿವಮೂರ್ತಿ, ಸೋಸಲೆ ಮಹದೇವಸ್ವಾಮಿ, ಉಕ್ಕಲಗೆರೆ ಬಸವಣ್ಣ, ಡಾ. ಜ್ಞಾನಪ್ರಕಾಶ್, ಸೋಮನಾಥಪುರ ಗ್ರಾ. ಪಂ. ಉಪಾಧ್ಯಕ್ಷ ಸಿದ್ದಪ್ಪ, ಕಾಂಗ್ರೆಸ್ ಮುಖಂಡರಾದ ಬೂದಳ್ಳಿ ಸಿದ್ದರಾಜು, ಸುಂದರನಾಯಕ, ತಲಕಾಡು ರಾಜು,ಸಿದ್ದನಹುಂಡಿ ನಟರಾಜು, ಸುರೇಶ, ಮಹದೇವ,ಕೆಬ್ಬೆ ಕೃಷ್ಣ, ಗದ್ದೆಮೋಳೆ ಸಿದ್ದರಾಜು ಇತರರು ಹಾಜರಿದ್ದರು.