ಕೆಂಭಾವಿ:ಜೂ.18: ಶಹಪೂರ ಮತಕ್ಷೇತ್ರದ ಜನತೆ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನಗೆ ಅಭೂತಪೂರ್ವ ಗೆಲುವು ತಂದುಕೊಟ್ಟ ಮತಕ್ಷೇತ್ರದ ಮತದಾರರಿಗೆ ನಾನು ಚಿರರುಣಿಯಾಗಿದ್ದು ಮತಕ್ಷೇತ್ರದ ಅಭಿವೃದ್ದಿ ಮಾಡಿ ನಿಮ್ಮ ಋಣ ತೀರಿಸುತ್ತೇನೆ ಎಂದು ನೂತನ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ವಿಜಯಪೂರ ನಗರದಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜೀನೀಯರ್ ಆಗಿ ಕೆಲಸ ಮಾಡುತ್ತಿದ್ದ ನಾನು 1994 ರಲ್ಲಿ ರಾಜಕೀಯ ಪ್ರವೇಶಿಸಿ ಮೊದಲಸಲ ವಿಧಾನ ಸಭೆ ಚುನಾವಣೆ ಎದುರಿಸಿ ಜಯಶಾಲಿಯಾದೆ. ಅಂದಿನಿಂದ ಇಂದಿನವರೆಗೆ ಏಳು ಬಾರಿ ವಿಧಾನ ಸಭೆ ಚುನಾವಣೆಗೆ ನಿಂತು ಐದು ಬಾರಿ ಗೆಲುವು ಸಾಧಿಸಿ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಡಿದ್ದು ಇದು ಕ್ಷೇತ್ರದ ಜನತೆಯ ಸಂಪೂರ್ಣ ಆಶಿರ್ವಾದವೆ ಎಂದು ಮತದಾರರನ್ನು ಕೊಂಡಾಡಿದರು.
ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಒಂದೆ ವಾರದಲ್ಲಿ ಐದು ಗ್ಯಾರಂಟಿಗಳ ಪೈಕಿ ಎರಡು ಗ್ಯಾರಂಟಿಗಳನ್ನು ಜಾರಿ ಮಡಿದೆ. ಇದನ್ನು ಸಹಿಸಲಾಗದ ಬಿಜೆಪಿ ಸುಳ್ಳು ಹೇಳಿಕೆ ನೀಡುತ್ತಾ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಜಾತಿ ಸಮುದಾಯಗಳ ಮಧ್ಯೆ ಸಂಘರ್ಷ ಉಂಟು ಮಾಡುವ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದು ಅವುಗಳಿಗೆ ಜನತೆ ಮರಳುಗಾದೆ ಈ ಬಾರಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಹೇಳಿದರು. ಬಡವರ ಹೊಟ್ಟೆಗೆ ಕನ್ನ ಹಾಕುವ ಕೇಂದ್ರ ಸರ್ಕಾರ ಐದು ಕಿಲೊ ಅಕ್ಕಿಯನ್ನು ವಾಪಸ್ ಪಡೆಯುವ ಮೂಲಕ ಊಟದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಯಾವಾಗಳು ತತ್ವ ಸಿದ್ಧಾಂತಗಳ ಮೇಲೆ ಆಡಳಿತ ನಡೆಸುವ ಕಾಂಗ್ರೇಸ್ ಪಕ್ಷ ರಾಜ್ಯದ ಹಿತ ಕಾಪಾಡಲು ಸದಾ ಬದ್ಧವಾಗಿದೆ. ರೈತರಿಗೆ ಮಾರಕವಾಗಿದ್ದ ಎಪಿಎಮ್‍ಸಿ ಕಾಯ್ದೆ ರದ್ದು ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದೆ. ಬಡ ಜನತೆಗೆ ನೀಡುವ ಅನ್ನಭಾಗ್ಯ ಅಕ್ಕಿಯ ಜೊತೆಗೆ ರಾಗಿ ಮತ್ತು ಜೋಳವನ್ನು ವಿತರಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು. ಶಂಕ್ರಣ್ಣ ವಣಕ್ಯಾಳ ಪ್ರಾಸ್ತಾವಿಕ ಮಾತನಾಡಿದರು.
ನಗನೂರ ಶ್ರೀ ಶರಣಪ್ಪ ಶರಣರು, ಶ್ರೀ ಖಂಡಪ್ಪ ತಾತಾ, ಮಾಳಹಳ್ಳಿಯ ಶ್ರೀ ಕೆಂಚರಾಯ ಪೂಜಾರಿ, ಶ್ರೀ ಸಯ್ಯದ ಹುಸೇನಿ ತುರಕಮಾನ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಐಸಿಸಿ ರಾಜ್ಯ ಕಾರ್ಯದರ್ಶಿ ಮರಿಗೌಡ ಹುಲಕಲ್, ಲಿಂಗನಗೌಡ ಮಾಲಿಪಾಟೀಲ, ಸಿದ್ಧನಗೌಡ ಪೆÇಲೀಸ್ ಪಾಟೀಲ, ವಾಮನರಾವ ದೇಶಪಾಂಡೆ, ಶರಣಪ್ಪ ಸಲಾದಪೂರ, ಶಾಂತಗೌಡ ನೀರಲಗಿ, ಶರಣಬಸ್ಸು ಡಿಗ್ಗಾವಿ, ಬಸನಗೌಡ ಹೊಸಮನಿ, ಬಾಪುಗೌಡ ಪಾಟೀಲ, ಕೃಷ್ಣಯ್ಯ ಗುತ್ತೇದಾರ, ಇಬ್ರಾಹಿಂ ಶಿರವಾಳ, ಶಿವರಾಜ ಬೂದೂರ, ಮಹಿಮೂದ ಬಸರಿ ಸೇರಿ ಹಲವರಿದ್ದರು. ಡಾ. ಯಂಕನಗೌಡ ನಿರೂಪಣೆ ಮಾಡಿದರು, ಬ್ಲಾಕ್ ಅಧ್ಯಕ್ಷ ಬಸವರಾಜ ಚಿಂಚೋಳಿ ಸ್ವಾಗತಿಸಿದರು, ಸಾಹೇಬಲಾಲ ಆಂದೇಲಿ ವಂದಿಸಿದರು