ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಮತ್ತೊಮ್ಮೆ ಆಶೀರ್ವದಿಸಿ: ಎಸ್.ರಘು

ಬೆಂಗಳೂರು, ಮೇ ೬- ಸರ್ ಸಿ.ವಿ. ರಾಮನ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ರಘು ಅವರ ಪರ ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ಆನಂದಪುರ, ಜೀವನ್‌ಬಿಮಾ ನಗರ, ಮರ್ಫಿಟೌನ್, ಲಕ್ಷ್ಮೀಪುರ ಭಾಗದಲ್ಲಿ ರೋಡ್ ಶೋ ನಡೆಸಿದ ಅಣ್ಣಾಮಲೈ ಕ್ಷೇತ್ರದ ಮನೆ ಮಗನಂತಿರುವ ಎಸ್. ರಘು ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿ ಕಣ್ಣಿಗೆ ಕಾಣಿಸುತ್ತಿದೆ. ಮೂರು ಬಾರಿ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಹಿರಿಯ ಶಾಸಕರಾಗಿರುವ ಎಸ್. ರಘು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ರಘು ಅವರು ೧೪೦ ಹಾಸಿಗೆಯ ಐಸೋಲೇಷನ್ ಆಸ್ಪತ್ರೆ, ೩೫೦ ಹಾಸಿಗೆಯ ಸಿ.ವಿ.ರಾಮನ್ ನಗರ ಆಸ್ಪತ್ರೆ, ಡಯಾಬಿಟಿಸ್ ಆಸ್ಪತ್ರೆ, ವಿಶ್ವದರ್ಜೆಯ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಒಂಭತ್ತು ನಮ್ಮ ಕ್ಲಿನಿಕ್‌ಗಳು ಕ್ಷೇತ್ರದ ಜನತೆಯ ಸೇವೆಗೆ ಸಮರ್ಪಿಸಿದ್ದಾರೆ ಎಂದರು.
ಸರ್ಕಾರಿ ಶಾಲೆಗಳ ಉನ್ನತೀಕರಣ, ಉದ್ಯಾನವನ, ಮೂಲಸೌಕರ್ಯ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇಂತಹ ಶಾಸಕರು ನಿಮಗೆ ಸಿಕ್ಕಿರುವುದು ಪುಣ್ಯ ಎಂದು ಅವರು ಹೇಳಿದರು.
ಅಭ್ಯರ್ಥಿ ಎಸ್. ರಘು ಅವರು ಮಾತನಾಡಿ, ಕ್ಷೇತ್ರದ ಜನತೆಯ ಆಶೀರ್ವಾದದಿಂದ ಮೂರು ಬಾರಿ ಆಯ್ಕೆಯಾಗಿ ನಿಮ್ಮ ಮನೆ ಮಗನಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮತ್ತೊಮ್ಮೆ ಅವಕಾಶ ಕೊಟ್ಟರೆ ನಿಮ್ಮ ಸೇವೆ ಮಾಡುತ್ತೇನೆ ಎಂದು ಮನವಿ ಮಾಡಿದರು.
ರೋಡ್ ಶೋಗೆ ಬಂದ ಅಣ್ಣಾಮಲೈ ಅವರಿಗೆ ಉತ್ತಮ ಸ್ಪಂದನೆ ದೊರೆಯಿತು. ಸಾವಿರಾರು ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅಣ್ಣಾಮಲೈ ಹಾಗೂ ಎಸ್. ರಘು ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರು. ಕೆಲವೆಡೆ ಹೂ ಮಳೆ ಸುರಿಸಿ ಅಭಿಮಾನ ಮೆರೆದರು.

ಸರ್. ಸಿ.ವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ರಘು ರವರು ಕ್ಷೇತ್ರದ ವಿವಿಧ ಕಡೆ ಪ್ರಚಾರ ಮಾಡುವ ವೇಳೆ ಪಕ್ಷದ ಕಾರ್ಯಕರ್ತರು ಭಾರಿ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಪ್ರಚಾರದ ವೇಳೆ ಪಕ್ಷದ ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.


ನಾಳೆ ಪ್ರಧಾನಿ ಮೋದಿ ಹವಾ
ಸಿ.ವಿ. ರಾಮನ್ ನಗರದಲ್ಲಿ ನಾಳೆ (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಹವಾ ಇರಲಿದೆ. ಅಭ್ಯರ್ಥಿ ಎಸ್. ರಘು ಅವರ ಪರ ಪ್ರಧಾನಿಯವರು ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.
ನಾಳೆ ಬೆಳಿಗ್ಗೆ ೮ ಗಂಟೆಗೆ ಬಿಇಎಂಎಲ್ ವೃತ್ತದ ಕೆಂಪೇಗೌಡ ಪ್ರತಿಮೆ ಬಳಿಯಿಂದ ಆರಂಭವಾಗಲಿರುವ ರೋಡ್ ಶೋ ನ್ಯೂ ತಿಪ್ಪಸಂದ್ರ ಮುಖ್ಯರಸ್ತೆ, ೮೦ ಅಡಿ ರಸ್ತೆ, ಇಂದಿರಾನಗರ ೧೨ನೇ ಮುಖ್ಯರಸ್ತೆ, ಸಿ.ಎಂ.ಎಚ್. ರಸ್ತೆ, ಹಲಸೂರು ಮೂಲಕ ಸಾಗಿ ಮಹಾತ್ಮಗಾಂಧಿ ರಸ್ತೆವರೆಗೂ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಕ್ಷೇತ್ರದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ.