ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ನಾಗೇಂದ್ರ

ಬಳ್ಳಾರಿ:ನ.3- ಕ್ಷೇತ್ರದ ಜನರಿಗೆ ನೀಡಿದ ಭರವಸೆಯಂತೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ, ಸುಳ್ಳುವ ಜಾಯಮಾನ ನನ್ನದಲ್ಲ, ನುಡಿದಂತೆ ನಡೆಯುವೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಚೆಳ್ಳಗುರ್ಕಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ, ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯ ಚೆಳ್ಳಗುರ್ಕಿ ಸೇರಿದಂತೆ ಅಸುಂಡಿ, ಲಿಂಗದೆವನಹಳ್ಳಿ, ಯಾಳ್ಪಿ, ವೈ.ಕಗ್ಗಲ್, ಜೋಳದರಾಶಿ, ಇಬ್ರಾಂಪುರ ಸೇರಿದಂತೆ ಈ ಯೋಜನೆ ವ್ಯಾಪ್ರಿಯಲ್ಲಿ ನಾನಾ ಹಳ್ಳಿಗಳು ಬರಲಿವೆ. ಸುಮಾರು 15-20 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ಸರ್ವೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಇಸ್ರೇಲ್ ದೇಶದ ನೆಟಾಫಿಮ್ ಕಂಪನಿಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದೆ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಏತ ನೀರಾವರಿ ಹಾಗು ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಮೊದಲ ಹಂತದ ಸರ್ವೆ ಕಾರ್ಯ ಇದಾಗಿದೆ. ಬರುವ ದಿನಗಳಲ್ಲಿ ಕ್ಷೇತ್ರದಾದ್ಯಂತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಸದ್ಯ ಈ ಯೋಜನೆ ಅನುಷ್ಠಾನಕ್ಕೆ ಡಿಪಿಆರ್ ತಯಾರಿಸುವ ಪ್ರಕ್ರಿಯೆ ನಡೆದಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರು, ವಿವಿಧ ಅಧಿಕಾರಿಗಳು, ಸಂಗನಕಲ್ ವಿಜಯಕುಮಾರ್, ಮಂಜುನಾಥ್ ಸೇರಿದಂತೆ ಇತರರಿದ್ದರು.