ಕ್ಷೇತ್ರದ್ಯಾಂತ ಬಿಜೆಪಿ ಟಿಕೆಟ್ ಬಗ್ಗೆ ಚರ್ಚೆ

ಬೇತಮಂಗಲ,ಏ.೧೨-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಹುಮತ ಪಡೆದುಕೊಳ್ಳಲು ಕಳೆದ ನಾಲ್ಕು ದಿನಗಳಿಂದ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲು ಕ್ಷಣಗಣನೆ ಆರಂಭವಾಗಿದ್ದು, ಕೆಜಿಎಫ್ ಕ್ಷೇತ್ರದಲ್ಲಿ ಬಿಸಿ-ಬಿಸಿ ಚರ್ಚೆ ಜತೆಗೆ ಸೋಲು-ಗೆಲುವಿನ ಲೆಕ್ಕಾಚಾರಗಳ ಬರಾಟೆ ಆರಂಭವಾಗಿದೆ.
ಶಾಸಕಿ ಎಂ.ರೂಪಕಲಾ ಎಲ್ಲಾ ಪಕ್ಷಗಳ ಕಾರ್‍ಯಕರ್ತರೊಂದಿಗೆ ಬೆರತು ಉತ್ತಮವಾಗಿ ಅಭಿವೃಧ್ಧಿ ಮಾಡುತ್ತಾ, ಅಭಿವೃದ್ಧಿಯೊಂದೆ ಮೂಲ ಮಂತ್ರವನ್ನಾಗಿ ಮಾಡಿಕೊಂಡು ಮುಂದಿನ ಶಾಸಕರಾಗಬೇಕೆಂದು ತುದಿಗಾಲಲ್ಲಿ ನಿಂತಿದ್ದಾರೆ.
ಇಂತಹ ಸಂಧರ್ಭದಲ್ಲಿ ಗುಂಪುಗಾರಿಕೆ ಬಣಗಳಾಗಿದ್ದ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿಗೆ ಸೆಡ್ಡು ಹೊಡೆಯಲು ವಿ.ಮೋಹನ್ ಕೃಷ್ಣವನ್ನು ಸಮಾಜ ಸೇವೆ ಮೂಲಕ ಕೆಜಿಎಫ್‌ನಾದ್ಯಾಂತ ಪರಿಚಯಿಸಿ ಮನೆ-ಮನೆಗೂ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಾ ಪಕ್ಷವನ್ನು ಬಲಪಡಿಸುತ್ತಾ ಪಕ್ಷದ ಎಲ್ಲಾ ಕಾರ್‍ಯಕ್ರಮಗಳನ್ನು ಯಶಸ್ವಿಗೊಳಿಸಿ ವಿಧಾನಸಭೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿದರು.
ಈ ಬಾರಿ ಸ್ವಕ್ಷೇತ್ರದವರಿಗೆ ಆದ್ಯತೆ ಕೊಡಬೇಕು, ಈ ಮಣ್ಣಿನ ರೈತನ ಮಗ ವಿ.ಮೋಹನ್ ಕೃಷ್ಣ ಶಾಸಕರಾಗಬೇಕೆಂದು ಗ್ರಾಮೀಣ ಪ್ರದೇಶದಲ್ಲಿ ಜನರ ಒತ್ತಾಸೆ ಹೆಚ್ಚಾಗಿದೆ. ಆದರೆ ಹೈಕಮಾಂಡ್ ಸ್ವಕ್ಷೇತ್ರದ ಮಣ್ಣಿನ ಮಗನಿಗೆ ಟಿಕೆಟ್ ನೀಡುತ್ತಾ ಎಂದು ಹಳ್ಳಿ ಕಟ್ಟೆಗಳಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕೆಜಿಎಫ್‌ಗೆ ಬೇಟಿ ಕೊಟ್ಟಾಗೆಲ್ಲ ಮಾಜಿ ಶಾಸಕ ಸಂಪಂಗಿ ಅವರೆ ಮುಂದಿನ ಶಾಸಕರೆಂದು ಬಹಿರಂಗವಾಗಿ ಹೇಳುತ್ತಿದ್ದರು, ಆದರೆ ದಿಢೀರ್‌ನೆ ಮಾಜಿ ಬಿಬಿಎಂಪಿ ಸದಸ್ಯ ವೇಲ್ ನಾಯ್ಕರ್ ಅವರನ್ನು ಕೆಜಿಎಫ್ ಕಡೆ ತಂದು ಆಕಾಂಕ್ಷಿ ಎಂದು ಹೇಳುತ್ತಿದ್ದು, ನಿಷ್ಠಾವಂತ ಕಾರ್‍ಯಕರ್ತರಲ್ಲಿ ಬೇಸರ ತಂದಿದೆ.