
ಕೋಲಾರ,ಮಾ,೩-ಮಡಿವಾಳ ಸಮಾಜಕ್ಕೆ ರಾಜಕೀಯವಾಗಿ ಯಾವುದೇ ಪ್ರಾತಿನಿಧ್ಯತೆ ಇಲ್ಲವಾಗಿದ್ದು ಸತತವಾಗಿ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜಸೇವೆ ಮೂಲಕ ಜನ ಮನ್ನಣೆ ಗಳಿಸಿರುವ ಮಡಿವಾಳ ಜನಾಂಗದ ಹೆಚ್.ಗೋಪಿಕೃಷ್ಣರಿಗೆ ಕಾಂಗ್ರೆಸ್ ಪಕ್ಷದಿಂದ ತರೀಕೆರೆ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ರಾಜ್ಯ ಕಾಂಗ್ರೆಸ್ ಮುಖಂಡರನ್ನು ರಾಜ್ಯ ಮಡಿವಾಳ ಸಂಘದ ರಾಜ್ಯ ಅಧ್ಯಕ್ಷ ಸಿ.ನಂಜಪ್ಪ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರದಲ್ಲಿ ಮಡಿವಾಳ ಸಮಾಜದ ಎಚ್.ಗೋಪಿಕೃಷ್ಣ ಸುಮಾರು ೧೫ ವರ್ಷದಿಂದ ಸಮಾಜಸೇವೆ ಮೂಲಕ ಉತ್ತಮ ಹೆಸರು ಮಾಡಿದ್ದಾರೆ. ಆಸ್ಪತ್ರೆಗಳಿಗೆ ಆಂಬುಲೆನ್ಸ್‌ಗಳನ್ನು ನೀಡಿ ಬಡ ರೋಗಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಯಾರೇ ನಿಧನರಾದರೂ ಅವರ ಮನೆಗೆ ೫ ಸಾವಿರ ರೂಗಳನ್ನು ನೀಡುತ್ತಾ ಬಂದಿದ್ದು ಹತ್ತು ಹಲವು ಸಮಾಜ ಸೇವೆ ಮಾಡುತ್ತಾ ಎಲ್ಲಾ ಸಮುದಾಯಗಳ ಪ್ರೀತಿ ಗಳಿಸಿರುವುದರಿಂದ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ತರೀಕೆರೆ ಕ್ಷೇತ್ರದಲ್ಲಿ ಹೆಚ್ ಗೋಪಿಕೃಷ್ಣ ಜೊತೆಗೆ ಕುರುಬ ಜನಾಂಗಕ್ಕೆ ಸೇರಿರುವ ಶ್ರೀನಿವಾಸ್ ಅವರ ಹೆಸರು ಕೇಳಿ ಬರುತ್ತಿದೆ. ಹಾಗಾಗಿ ಪಕ್ಷಕ್ಕೆ ನಿಷ್ಠರಾಗಿರುವ ಹೆಚ್. ಗೋಪಿಕೃಷ್ಣ ಅವರು ತರೀಕೆರೆಯಲ್ಲೇ ಹುಟ್ಟಿ ಬೆಳೆದವರು, ಅಲ್ಲಿನ ಸಮಸ್ಯೆಗಳು ಅರಿತವರು, ಕ್ಷೇತ್ರದ ಬದಲಾವಣೆ ಮಾಡುತ್ತಾರೆ ಎಂಬ ಭರವಸೆ ನಮಗಿದೆ ಅವರಿಗೆ ಅವಕಾಶ ಕಲ್ಪಿಸಿದರೆ ಸಮುದಾಯಕ್ಕೆ ನಾಯಕತ್ವ ಸಿಗುವುದಲ್ಲದೆ ,ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆಯೆಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಗೋಪಿಕೃಷ್ಣರಿಗೆ ಟಿಕೆಟ್ ನೀಡದೆ ಹಿಂದೆ ವಂಚಿಸಿದ್ದಾರೆ ಪ್ರಸ್ತುತ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ.ಅಂತವರಿಗೆ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿ ಕೊಟ್ಟರೆ ಮಡಿವಾಳ ಸಮಾಜ ಕಾಂಗ್ರೆಸ್ ಬೆಂಬಲಕ್ಕೆ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲೂ ನಿಲ್ಲುವುದಾಗಿ ಅವರು ತಿಳಿಸಿದರು.