ಎನ್.ವೀರಭದ್ರಗೌಡ
ಬಳ್ಳಾರಿ, ಏ.30: ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರ ಮೊದಲ ಸಾಮನ್ಯ ಕ್ಷೇತ್ರವಾಗಿತ್ತು. ಕೇತ್ರ ಪುನರ್ ವಿಂಗಡಣೆಯಿಂದ 2008 ರಿಂದ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದೆ.ಕ್ಷೇತ್ರದಲ್ಲಿ ಈ ಮೊದಲಿದ್ದ ಪಾಪಿನಾಯಕನಹಳ್ಳಿ ಹೋಬಳಿ ತೆಗೆದು, ಸಂಡೂರು ತಾಲೂಕಿನ ಎಲ್ಲಾ ಹಳ್ಳಿಗಳ ಜೊತೆ ಬಳ್ಳಾರಿ ತಾಲೂಕಿನ ಕುಡಿತಿನಿ ಹೋಬಳಿ ಸೇರಿಕೊಂಡಿದೆ. ಚೋರನೂರು, ಯಶವಂತನಗರ, ತಾರಾನಗರ,ದರೋಜಿ ಹೋಬಳಿಗಳನ್ನು ಹೊಂದಿದೆ.
ಟಿಬಿಡ್ಯಾಂನಿಂದ ಸ್ವಾಮಿ ಹಳ್ಳಿವರೆಗೆ ಹಬ್ಬಿರುವ ಬೆಟ್ಟ ಪ್ರದೇಶದಲ್ಲಿ ಉತ್ಕೃಷ್ಟ ಕಬ್ಬಿಣ ಮತ್ತು ಮ್ಯಾಂಗನೀಸ್‍ನ ಖನಿಜ ಸಂಪತ್ತು ಹಾಗು ಹಸಿರಾದ ದಟ್ಟ ಕಾಡು ಮತ್ತು ನಾರಿಹಳ್ಳಿ ಜಲಾಶಯದಿಂದ ಬಿರುಬಿಸಿಲಿನ ಬಳ್ಳಾರಿ ಜಿಲ್ಲೆಯ ಮಲೆನಾಡೆಂದೇ ಖ್ಯಾತಿ ಪಡೆದಿದೆ.
ಸಂಡೂರು ಅರಸರ ಅರಮನೆ, ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನ, ಉಬ್ಬಳಗಂಡಿಯ ಶಿಲಾ ಬೆಟ್ಟ, ನಾರಿಹಳ್ಳದ ಜಲಾಶಯ, ಗಂಡಿ ನರಸಿಂಹಸ್ವಾಮಿ ದೇವಸ್ಥಾನ,
200 ಕ್ಕೂ ಹೆಚ್ಚು ಆರ್ಯುವೇದ ಔಷಧಿಗಳ ಸಸ್ಯವನ, ನಂದಿ ಹಳ್ಳಿ ಸ್ನಾತಕೋತ್ತರ ಕೇಂದ್ರ ಮೊದಲಾದವುಗಳಿಂದ ಇದು ಪರಿಸರ ಮತ್ತು ಧಾರ್ಮಿಕ ಪ್ರವಾಸಿ ತಾಣವಾಗಿದೆ.
ಕ್ಷೇತ್ರದ ಮೂಲ ಉದ್ಯೋಗ ಕೃಷಿಯಾದರೂ ತಾಲೂಕಿನಲ್ಲಿ ದೊರೆಯುವ ಕಬ್ಬಿಣ ಅದಿರಿನ ಗಣಿಗಾರಿಕೆಯೂ ಮಹತ್ವದ್ದಾಗಿದೆ, ಇದರಿಂದ ಕಾಡು ನಿಧಾನವಾಗಿ ಬರಿದಾಗುತ್ತಿದೆ. ವಾರ್ಷಿಕ 32 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರಿನ ಉತ್ಪಾದನೆ ಆಗುತ್ತಿದೆ. ಇದರಿಂದಾಗಿ ದೇಶದಲ್ಲಿಯೇ ಅತಿ ಹೆಚ್ಚು ಉಕ್ಕು ಉತ್ಪಾದನೆಯ ಜಿಂದಾಲ್ ಕಾರ್ಖಾನೆ ಇಲ್ಲಿದ್ದು. 30 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ನೇರವಾಗಿ ಉದ್ಯೋಗ ದೊರೆಯುತ್ತಿದೆ.
ಇಷ್ಟೇ ಅಲ್ಲದೆ 1700 ಮೆಗ ವ್ಯಾಟ್ ವಿದ್ಯುತ್ ಉತ್ಪಾದನೆಯ ಬಳ್ಳಾರಿ ಶಾಖೋತ್ಪನ್ನ ಕೇಂದ್ರ, ಮೆದು ಕಬ್ಬಿಣ ಖಾರ್ಕಾನೆಗಳಿಂದ ಔದ್ಯಮಿಕವಾಗಿಯೂ ಬೆಳೆದು ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಆರ್ಥಿಕವಾಗಿ ಉತ್ತಮ ಸ್ಥಾನದಲ್ಲಿದ್ದರೂ ಆರೋಗ್ಯ, ಶಿಕ್ಷಣ, ಸಾರಿಗೆ ಹಾಗು ಮೂಲ ಭೂತ ಸೌಲಭ್ಯಗಳ ಸಮಸ್ಯೆಯನ್ನು ಎದಿರಿಸುತ್ತಿದೆ. ಇದರಿಂದ ರಾಜ್ಯದ ಅತೀ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿದೆ.
ಸಂಡೂರು ರಾಜ ಮನೆತನ ಈ ಮೊದಲು ಇಲ್ಲಿ ಆಳುತ್ತಿತ್ತು. ಈ ಮನೆತನದ ಎಂ.ವೈ ಘೋರ್ಪಡೆ ಅವರು ಒಮ್ಮೆ ಅವಿರೋಧ ಆಯ್ಕೆ ಸೇರಿದಂತೆ ಏಳು ಬಾರಿ ಶಾಸಕರಾಗಿದ್ದರು.
ಇವರಲ್ಲದೆ ಒಂದು ಬಾರಿ ಕಮ್ಯುನಿಸ್ಟ್ ನಿಂದ ಭೂಪತಿ, ಜೆಡಿಎಸ್ ನಿಂದ ಸಂತೋಷ್ ಲಾಡ್ ಶಾಸಕರಾಗಿದ್ದರು.
ಏಳು ಜನ ಕಣದಲ್ಲಿ:
ಹಾಲಿ ಶಾಸಕ ಈ. ತುಕರಾಂ
ಕಾಂಗ್ರೆಸ್ ನಿಂದ ನಾಲ್ಕನೇ ಬಾರಿಗೆ ಆಯ್ಕೆಯಾಗಲು ಸ್ಪರ್ಧಾ ಕಣದಲ್ಕಿದ್ದಾರೆ. ಬಿಜೆಪಿಯಿಂದ ಹೊಸ ಮುಖ ಶಿಲ್ಪಾ ರಾಘವೇಂದ್ರ, ಜೆಡಿಎಸ್ ನಿಂದ ಕುರೆಕುಪ್ಪ ಸೋಮಪ್ಪ, ಕೆಆರ್ಪಿ ಪಕ್ಷದಿಂದ ಬಳ್ಳಾರಿಯ ಪಾಲಿಕೆಯ ಮಾಜಿ ಸದಸ್ಯ ಕೆ.ಎಸ್.ದಿವಾಕರ್ ಸೇರಿದಂತೆ 7 ಜನರು ಕಣದಲ್ಲಿದ್ದಾರೆ.
ಮತದಾರರು:
ಕ್ಷೇತ್ರದಲ್ಲಿ 1,11,839 ಪುರುಷ, 1,11,426 ಮಹಿಳೆ, 26 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಒಳಗೊಂಡು ಒಟ್ಟು 2,23,281 ಮತದಾರರಿದ್ದಾರೆ. ಈ ಪೈಕಿ 7,800 ಯುವ, 3,080 ಜನ 80 ವರ್ಷ ಮೇಲ್ಪಟ್ಡ, 2,693 ವಿಶೇಷಚೇತನ ಮತದಾರರಿದ್ದಾರೆ. ಮತದಾನಕ್ಕೆ 251 ಮತಗಟ್ಟೆಗಳನ್ನು ಸ್ಥಾಪಿಸುತ್ತಿದೆ.