ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

ಮಂಗಳೂರು, ನ.೪- ನಗರ ಹೊರವಲಯದ ಕಾವೂರಿನಲ್ಲಿ ಮಂಗಳವಾರ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಕಾವೂರು ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ (೬೦) ದುಷ್ಕರ್ಮಿಗಳಿಂದ ಕೊಲೆಯಾದ ವ್ಯಕ್ತಿ.
ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲೇ ಸ್ವಂತ ಮನೆ
ಮಾಡಿ ತನ್ನ ಪತ್ನಿ ಜತೆ ವಾಸಿಸುತ್ತಿದ್ದರು. ಮಂಗಳವಾರ
ಸುರೇಂದ್ರನ್ ನಗರಕ್ಕೆ ತೆರಳಿದ್ದರು. ಅವರ ಪತ್ನಿ ಫಾರ್ಮ್ ಉದ್ಯಮ ವ್ಯವಹಾರ ನೋಡಿಕೊಳ್ಳಲು ತೆರಳಿದ್ದರು. ಮಧ್ಯಾಹ್ನ ೧ ಗಂಟೆ ವೇಳೆಗೆ ಸುರೇಂದ್ರನ್ ಅವರು ಮನೆಗೆ ಮರಳಿದ್ದು, ಆ ಬಳಿಕ ದುಷ್ಕರ್ಮಿಗಳು ಕೊಲೆ ನಡೆಸಿದ್ದಾರೆ. ಸುರೇಂದ್ರನ್ ಅವರ ಪತ್ನಿ ಸಂಜೆ ವೇಳೆ ಮನೆಗೆ ಬಂದಾಗ ಮನೆ ಸುತ್ತ ಜನ ಸೇರಿದ್ದರು. ಪತಿ ಕೊಲೆಯಾದ ವಿಷಯ ಅವರಿಗೆ ತಿಳಿದಿರಲಿಲ್ಲ. ಘಟನೆ ತಿಳಿಯುತ್ತಿದ್ದಂತೆ ಅವರು ಆಘಾತಕ್ಕೆ ಒಳಗಾದರು. ಸುರೇಂದ್ರನ್ ಕೊಲೆ ಸ್ಪಷ್ಟ
ಕಾರಣವೇನೆಂದು ತಿಳಿದು ಬಂದಿಲ್ಲ. ಸುರೇಂದ್ರನ್ ಅವರು ಫಾರ್ಮ್ ಉದ್ಯಮವನ್ನು ನಡೆಸುತ್ತಿದ್ದು, ವ್ಯವಹಾರ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.