ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಯಾದಗಿರಿ,ಏ.23-ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಹೊಡೆದು ಕುತ್ತಿಗೆ ಹಿಚುಕಿ ಕೊಲೆ ಮಾಡಿರುವ ಘಟನೆ ಯಾದಗಿರಿ ನಗರದ ಹೆಂಡಗಾರ ಅಗಸಿಯಲ್ಲಿ ನಡೆದಿದೆ.
ರಾಕೇಶ್ ತಂದೆ ನಾಗೇಂದ್ರ ಜೀನಕೇರಾ (24) ಕೊಲೆಯಾದ ಯುವಕ.
ರಾಕೇಶ್ ಯಾದಗಿರಿ ನಗರದಲ್ಲಿರುವ ಆಸೀಫ್ ಅವರ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ಹೋಗಿದ್ದು, ಈ ವೇಳೆ ಆಸೀಫ್ ರೊಟ್ಟಿ ಇಲ್ಲ ಎಂದು ರಾಕೇಶ್‍ಗೆ ಅವಾಚ್ಯವಾಗಿ ಬೈಯ್ದಿದ್ದಾನೆ ಎನ್ನಲಾಗಿದೆ. ಇದರಿಂದ ರಾಕೇಶ್ ರೊಟ್ಟಿ ಇಲ್ಲ ಎಂದ ಮೇಲೆ ರೊಟ್ಟಿ ಕೇಂದ್ರ ಏಕೆ ಇಟ್ಟಿರುವೆ ಎನ್ನುತ್ತ ಮನೆಗೆ ಬಂದಿದ್ದಾನೆ ಎನ್ನಲಾಗಿದೆ. ಈ ಕಾರಣಕ್ಕೆ ಆಸೀಫ್ ಮತ್ತು ಫಯಾಜ್ ಕೂಡಿ ರಾಕೇಶ್ ಮನೆಗೆ ಬಂದು ಅವಾಚ್ಯವಾಗಿ ಬೈಯ್ದು, ಜಾತಿ ನಿಂದನೆ ಮಾಡಿದಲ್ಲದೆ ರಾಕೇಶ್‍ಗೆ ಹೊಡೆದು ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ರಾಕೇಶ್ ತಾಯಿ ಮಂಜಮ್ಮ ಅವರು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ದೂರಿನ ಅನ್ವಯ ಯಾದಗಿರಿ ಉಪ ವಿಭಾಗದ ಡಿಎಸ್‍ಪಿ ಅರಣಕುಮಾರ ಕೋಳೂರ ಅವರು ತನಿಖೆ ನಡೆಸಿ ಯಾದಗಿರಿ ನಗರದ ದಬೀರ್ ಕಾಲೋನಿಯ ಫಯಾಜ್ ತಂದೆ ಹಾಜಿಮಿಯಾ ಆದೋನಿ (22) ಎಂಬಾತನನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ ಎಂದು ಯಾದಗಿರಿ ಎಸ್‍ಪಿ ತಿಳಿಸಿದ್ದಾರೆ.