ಕ್ಷುಲ್ಲಕ ಕಾರಣಕ್ಕೆ ಬೆಂಕಿ ಮಗು ಸೇರಿ ಮೂವರ ಸಾವು

ಕೋಝಿಕೋಡ್ (ಕೇರಳ),ಏ.೩-ಎಕ್ಸ್‌ಪ್ರೆಸ್ ರೈಲಿಗೆ ಹತ್ತುವ ವಿಚಾರವಾಗಿ ನಡೆದ ಜಗಳದ ಬಳಿಕ ಓರ್ವ ವ್ಯಕ್ತಿ ಮತ್ತೊಬ್ಬ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ್ದರಿಂದ ಒಂದು ವರ್ಷದ ಮಗು, ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮೃತದೇಹಗಳು ಕೋಜಿಕೋಡ್‌ನಲ್ಲಿ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿವೆ.
ವ್ಯಕ್ತಿಯೊಬ್ಬ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹಪ್ರಯಾಣಿಕ ಮಹಿಳೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಈ ಮೂವರ ಶವಗಳು ಹಳಿಯಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.ಮಗು, ಮಹಿಳೆ ಸೇರಿದಂತೆ ಮೂವರ ಮೃತದೇಹಗಳು ನಿನ್ನೆ ರಾತ್ರಿ ಸಿಕ್ಕಿದ್ದು, ರೈಲಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಬೆಂಕಿ ಹಚ್ಚಿದ ಬಳಿಕ ಈ ಮೂವರು ನಾಪತ್ತೆಯಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ ಸುಮಾರು ೯.೪೫ರ ಹೊತ್ತಿಗೆ ಅಲಪ್ಪುಜಾ-ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್ ರೈಲು ಕೋಝಿಕೋಡ್ ನಗರದ ಕೊರಪ್ಪುಜ ರೈಲು ಸೇತುವೆ ಬಳಿ ತಲುಪಿತ್ತು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸಹ ಪ್ರಯಾಣಿಕ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ೮ ಮಂದಿ ಇತರೆ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿತ್ತು.ಈ ಪೈಕಿ ಐವರು ಗಂಭೀರವಾಗಿ ಗಾಯಗೊಂಡಿದ್ದು ಕೋಝಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಮೂವರು ಸಣ್ಣ ಸುಟ್ಟ ಗಾಯಗಳೊಂದಿಗೆ ಕೋಝಿಕೋಡ್‌ನ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಪ್ರಯಾಣಿಕರಲ್ಲಿ ತಲಸ್ಸೆರಿಯ ಅನಿಲಕುಮಾರ್, ಪತ್ನಿ ಸಜಿಶಾ, ಮಗ ಅದ್ವೈತ್, ಕಣ್ಣೂರಿನ ರೂಬಿ ಮತ್ತು ತ್ರಿಶೂರಿನ ಪ್ರಿನ್ಸ್ ಎಂದು ಗುರುತಿಸಲಾಗಿದೆ.ರೈಲ್ವೆ ಮೂಲಗಳ ಪ್ರಕಾರ, ಅಲಪ್ಪುಳ ಕಣ್ಣೂರು ಮುಖ್ಯ ಕಾರ್ಯನಿರ್ವಾಹಕ ಎಕ್ಸ್‌ಪ್ರೆಸ್ ರೈಲಿನ ಡಿ ೧ ಬೋಗಿಯಲ್ಲಿ ರಾತ್ರಿ ೧೦ ರ ಸುಮಾರಿಗೆ ಘಟನೆ ನಡೆದಿದೆ. ಪ್ರಯಾಣಿಕರು ತುರ್ತು ಸರಪಳಿ ಎಳೆದ ನಂತರ ಆರೋಪಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಇದಕ್ಕೂ ಮುನ್ನ, ಅಪರಿಚಿತ ವ್ಯಕ್ತಿ ತನ್ನ ಸಹ ಪ್ರಯಾಣಿಕ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ್ದ. ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇತರ ಪ್ರಯಾಣಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅವರೂ ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಾರ್ಡ್‌ನ ವೈದ್ಯರ ಪ್ರಕಾರ, ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಭವಿಸಿದಾಗ ಅಲಪ್ಪುಳದಿಂದ ಕಣ್ಣೂರಿಗೆ ಹೋಗುವ ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್ ಕೋಝಿಕೋಡ್ ಸೆಂಟ್ರಲ್ ಸ್ಟೇಷನ್‌ನಿಂದ ಹೊರಟು ಎಲತ್ತೂರ್ ಸೇತುವೆ ಬಳಿ ಇತ್ತು. ಆರೋಪಿ ಕೆಂಪು ಅಂಗಿ ಧರಿಸಿದ್ದ ಎಂದು ರೈಲಿನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ.ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಜನರು ಆಕೆಯ ಪ್ರಾಣ ಉಳಿಸಲು ಪ್ರಯತ್ನಿಸಿದರು. ಆಗ ಅವರಲ್ಲಿ ಕೆಲವರು ಗಾಯಗೊಂಡರು. ದೊಡ್ಡ ಗಲಾಟೆಯೇ ಸಂಭವಿಸಿತು. ಆಗ ಜನರು ಇತರ ಬೋಗಿಗಳಿಗೆ ಓಡಿ ಹೋದರು” ಎಂದು ಗಿರೀಶ್ ಎಂಬ ಪ್ರಯಾಣಿಕರು ಹೇಳಿದರು.ರೈಲನ್ನು ಎಲತ್ತೂರಿನಲ್ಲಿ ನಿಲ್ಲಿಸಲಾಗಿದ್ದು, ಅವಘಡದ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. “ಗಾಯಗೊಂಡಿರುವ ಎಲ್ಲಾ ಎಂಟು ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಮತ್ತು ಅಗತ್ಯ ತಪಾಸಣೆಯ ನಂತರ ರೈಲನ್ನು ಅದರ ಗಮ್ಯಸ್ಥಾನಕ್ಕೆ ಕಳುಹಿಸಲಾಗಿದೆ” ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ತಿಳಿಸಿದ್ದಾರೆ.