ಕ್ಷಯ ರೋಗ ಭೀತಿ ಬೇಡ

ಕೋಲಾರ, ಜು,೧೪- ಕ್ಷಯ ರೋಗ ಭೀತಿ ಬೇಡ ಸಮರ್ಪಕ ಚಿಕಿತ್ಸೆಯಿಂದ ನಿರ್ಮೂಲನೆಗೊಳಿಸೋಣ ಹಾಗೂ ರೋಗ ಬರುವುದಕ್ಕಿಂತ ಮುನ್ನಾ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ನವಜಾತ ಶಿಶುಗಳಿಗೆ ಕ್ಯಾಲ್ಮೆಟ್ ಗೆರಿನ್(ಬಿಸಿಜಿ) ಲಸಿಕೆಯನ್ನು ತಪ್ಪದೇ ಹಾಕಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಕುರಿತಾದ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಕ್ಷಯರೋಗ ಬಾರದಂತೆ ತಡೆಯಲು ಯಥೇಚ್ಚವಾಗಿ ಹಣ್ಣು ಮತ್ತು ತರಕಾರಿಯನ್ನು ಸೇವನೆ ಮಾಡಬೇಕು. ಕಾರ್ಬೋಹೈಡ್ರೇಟ್ ಮತ್ತು ಪ್ರೊಟೀನ್ ಒಳಗೊಂಡಿರುವ ಆಹಾರ ಸೇವನೆ ಮಾಡಬೇಕು ಧೂಮಪಾನ, ಮದ್ಯಪಾನ ತ್ಯಜಿಸಬೇಕು. ಪ್ರತಿ ದಿನ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸಾಮಾನ್ಯವಾಗಿ ಮಧುಮೇಹ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಕ್ಷಯ ರೋಗ ನಿರ್ಮೂಲನೆಯ ಉದ್ದೇಶದಿಂದ ಹಲವು ಉಪಯುಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಎಂಬ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪ್ರತಿ ವಾರಕ್ಕೆ ಎರಡು ಬಾರಿ ಆಶಾ ಕಾರ್ಯಕರ್ತರು ಮನೆಮನೆಗೂ ಭೇಟಿ ನೀಡಿ ರೋಗಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ ಹಾಗೂ ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ಗುಣಪಡಿಸುವುದು ಮೊದಲಾದ ಕ್ರಮಗಳನ್ನು ವಹಿಸಲಾಗುತ್ತಿದೆ. ಟಿಬಿಯು ಶ್ವಾಸಕೋಶಗಳಷೆ ಅಲ್ಲದೆ ದೇಹದ ಇನ್ನಿತರ ಭಾಗಗಳಿಗೂ ಬರಬಹುದು. ಸಾರ್ವಜನಿಕರು ರೋಗ ನಿರ್ಣಯಿಸಿ ಎಲ್ಲ ಪ್ರಕರಣಗಳಿಗೆ ಉಚಿತ ಚಿಕಿತ್ಸೆ ಮತ್ತು ಕಫ ಪರೀಕ್ಷೆಯನ್ನು ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಜಗದೀಶ್ ಜಿಲ್ಲಾ ಶಸ್ತ್ರಚಿಕಿಸ್ತಕರಾದ ಡಾ. ವಿಜಯಕುಮಾರ್. ಆರ್‌ಸಿಎಚ್ ಅಧಿಕಾರಿ ಡಾ. ವಿಜಯಕುಮಾರಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಪ್ರಸನ್ನಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮುದ್ದಣ್ಣ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.